ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ನಾಗ್ಪುರದ ರೇಶಿಮ್ ಭಾಗ್ನಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿ (ಡಾ.ಹೆಗಡೇವಾರ್ ಸ್ಮೃತಿ ಮಂದಿರ)ಗೆ ಇಂದು ಬೆಳಗ್ಗೆ ಭೇಟಿ ನೀಡಿದರು.
ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೇವಾರ್ ಹಾಗೂ ಎರಡನೇ ಸರಸಂಘಚಾಲಕ್ ಎಂ.ಎನ್.ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗ್ಪುರದವರೇ ಆದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಸಂಬಂಧ ಸರಿ ಇಲ್ಲ ಎನ್ನುವ ಊಹಾಪೋಹಗಳ ನಡುವೆ, ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.ಸ್ಮಾರಕದಲ್ಲಿರುವ ಸ್ಮೃತಿ ಭವನದಲ್ಲಿ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಪದಾಧಿಕಾರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು.ಅಲ್ಲಿದ್ದ ಸಂದೇಶ ಪುಸ್ತಕದಲ್ಲಿ, "ಈ ಸ್ಮಾರಕವನ್ನು ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಸಂಘಟನೆಯ ಮೌಲ್ಯಗಳಿಗೆ ಸಮರ್ಪಿಸಲಾಗಿದೆ" ಎಂದು ಹಿಂದಿಯಲ್ಲಿ ಮೋದಿ ಅವರು ಬರೆದರು.