ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಎರಡೂ ರಾಷ್ಟ್ರಗಳು ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದವು. ಅದರ ಮಾತುಕತೆಗಳು ಮುಂದುವರಿಯದ ಕಾರಣ, ಮತ್ತೆ ಯುದ್ಧ ಆರಂಭವಾಗಿದೆ. ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಮತ್ತೆ ಮಾರಣಹೋಮ ಆರಂಭಿಸಿದೆ.
ಇದರಿಂದ ತೀವ್ರ ಆಕ್ರೋಶಕ್ಕೀಡಾಗಿರುವ ಪ್ಯಾಲೆಸ್ಟೈನಿಯನ್ನರು, ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಯುದ್ಧ ಮರು ಆರಂಭವಾಗಿದ್ದಕ್ಕೆ ತೀವ್ರ ಕ್ರೋಧಗೊಂಡು ಕದನ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಹಮಾಸ್ ಉಗ್ರರ ವಿರುದ್ಧದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಾ, ಯುದ್ಧ ನಿಲ್ಲಿಸಲು ಜನರು ಆಗ್ರಹಿಸುತ್ತಿದ್ದಾರೆ. ನೂರಾರು ಪ್ಯಾಲೆಸ್ಟೈನಿಯನ್ನರು ಹಮಾಸ್ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಡಿಯೋ ಒಂದರಲ್ಲಿ ಕಾಣುವಂತೆ, "ಜನರು ಯುದ್ಧ ಬಯಸುತ್ತಿಲ್ಲ. ನಮಗೆ ಹಮಾಸ್ ಬೇಡ, ಅಲ್ ಜಜೀರಾ ಬೇಡ. ನಮ್ಮ ಪ್ರಾಣ ಉಳಿದರೆ ಸಾಕು ಎಂದು ಘೋಷಣೆ ಕೂಗುತ್ತಿರುವುದು ಇದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭಗೊಂಡ 17 ತಿಂಗಳು ಗತಿಸಿದ್ದು, ಅಪಾರ ಸಾವು - ನೋವು ಸಂಭವಿಸಿದೆ. ಆದರೆ, ಈಗ ಹಮಾಸ್ ವಿರುದ್ಧವೇ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಗಾಜಾಪಟ್ಟಿಯ ಬೀಟ್ ಲಹಿಯಾ ನಗರದಲ್ಲಿ ಮಂಗಳವಾರ ನಡೆದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಜನರು ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯುದ್ಧ ನಿಲ್ಲಿಸಿ, ನಾವು ಸಾಯಲು ಬಯಸುವುದಿಲ್ಲ, ನಮ್ಮ ಮಕ್ಕಳ ರಕ್ತ ಚೆಲ್ಲಲು ಬಿಡುವುದಿಲ್ಲ ಎಂದು ಬರಹಗಳಿರುವ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.
ಕೆಲ ಪ್ರತಿಭಟನಾಕಾರರು ಹಮಾಸ್ ತೊಲಗಲಿ ಎಂಬ ಘೋಷಣೆಗಳನ್ನೂ ಕೂಗಿದರು. ಹಮಾಸ್ ಬಂಡುಕೋರರಿಗೆ ಬೆಂಬಲಿಸುವ ಜನರನ್ನು ಪ್ರತಿಭನಾಕಾರರು ಅಲ್ಲಿಂದ ತೊಲಗಿಸುವ ದೃಶ್ಯಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು.