ಮಂಗಳೂರು: ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಯಾವುದೇ ಪೂರ್ವಸಿದ್ಧತೆ ಇಲ್ಲದೇ ದಿನ ಬೆಳಗಾಗುವುದರೊಳಗೆ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಉಂಟಾಗಿರುವ ಅವ್ಯವಸ್ಥೆಯ ಆಗರದಿಂದಾಗಿ ಸಾರ್ವಜನಿಕರು ದಿನನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದ್ದು ಈಗಾಗಲೇ ಅಧಿವೇಶನದಲಲ್ಲಿ ವಿಷಯ ಪ್ರಸ್ತಾಪಿಸಿ ಕಂದಾಯ ಸಚಿವರನ್ನು ಭೇಟಿಯಾದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ. ಅವರು ನಗರದ ಅಟಲ್ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಸಾಮಾನ್ಯರಿಗೆ ತೊಂದರೆಯಾಗುವ ಇಂತಹ ನಿಯಮಗಳನ್ನು ಏಕಾಏಕಿ ಇಡೀ ರಾಜ್ಯದ ತುಂಬೆಲ್ಲಾ ತರುವ ಮೊದಲು ಯಾವುದಾದರೂ ಒಂದೆರಡು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಅದರ ಸಾಧಕ-ಭಾದಕಗಳನ್ನು ನೋಡಿಕೊಂಡು ನಂತರವೇ ರಾಜ್ಯಕ್ಕೆ ಅನ್ವಯಿಸಬೇಕಿತ್ತು. ಅದು ಬಿಟ್ಟು ಧಿಡೀರನೆ ಆತುರದಿಂದ ಕೈಗೊಂಡ ನಿರ್ಧಾರದಿಂದ ಎಲ್ಲವೂ ಅಯೋಮಯವಾಗಿದೆ. ಕಾವೇರಿ 2.0 ತಂತ್ರಾಂಶ ಜೋಡಣೆಯ ನಂತರವಂತೂ ಸಮಸ್ಯೆ ಉಲ್ಬಣವಾಗಿದ್ದು ಯಾವಾಗ ನೋಡಿದರೂ ಸರ್ವರ್ ಡೌನ್, ದಾಖಲೆಗಳು ಅಪ್‌ಲೋಡ್ ಆಗುತ್ತಿಲ್ಲ ಎಂಬ ಉತ್ತರ ಸಿಗುತ್ತಿದೆ. ಮದುವೆ, ಸಾಲ, ಲೋನ್ ಇತ್ಯಾದಿ ಅಗತ್ಯ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿಗಳ ಮೂಲಕ ಹಣವನ್ನು ಹೊಂದಿಸಿಕೊಳ್ಳಲೂ ಸಾಧ್ಯವಾಗದೇ ಸಾವಿರಾರು ಜನರು ಈ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಾ ಪರಿತಪಿಸುತ್ತಿದ್ದಾರೆ.
ಅವಿಭಜಿತ ಹಕ್ಕಿನ ಕ್ರಯ ಸಾಧನ ಪತ್ರ, ಮೂಲಿ ಹಕ್ಕಿನ ಕ್ರಯ ಸಾಧನ ಪತ್ರ, ವರ್ಗ ರೈಟ್ಸ್, ಹಕ್ಕು ಬಿಡುಗಡೆ ಪತ್ರ, ನಗರ ಪ್ರದೇಶಗಳ ಕೃಷಿ ಭೂಮಿಯ ಕ್ರಯ ಸಾಧನ ಪತ್ರ, ಮೊಬೈಲ್ ಮೂಲಕ ಆಸ್ತಿಯ ಸ್ಥಳಸೂಚಿ ಸೆರೆಹಿಡಿಯುವ ಸಮಯದಲ್ಲಿ ತಾಂತ್ರಿಕ ಸಮಸ್ಯೆ, ಸಾಫ್ಟ್‌ವೇರ್‌ನ ತಂತ್ರಾಂಶದ ದೋಷದಿಂದ ಸ್ಥಳಸೂಚಿ ರಸ್ತೆಯ ನಂಬರ್ ಬದಲಾಗುವುದು ಸೇರಿದಂತೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ.
ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶ ನಿರ್ಬಂಧಿಸುವ ಕ್ರಮವಿಲ್ಲ. ಆದರೆ ನಮ್ಮ ಮಂಗಳೂರಿನ ಮೂಡ ಕಚೇರಿ ಒಳಗೆ ಯಾವ ಸಾರ್ವಜನಿಕರಿಗೂ, ವಕೀಲರುಗಳಿಗೂ ಈಗ ಪ್ರವೇಶ ನಿರ್ಬಂಧಿಸಲಾಗಿದೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದ್ದು ಕೆಟ್ಟ ದಾಖಲೆಯೊಂದು ನಮ್ಮ ಮಂಗಳೂರಿನ ಹೆಸರಿನಲ್ಲಿ ದಾಖಲಾಗಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಕಳೆದ ಎರಡು ವರ್ಷಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಗೂಡಾಗಿರುವ ಮಂಗಳೂರಿನ ಮೂಡಾದ ಅಕ್ರಮಗಳನ್ನು ನಿಯಂತ್ರಿಸುವುದನ್ನು ಬಿಟ್ಟು ನ್ಯಾಯಯುತವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲು ಬರುವ ಸಾರ್ವಜನಿಕರನ್ನು, ವಕೀಲರುಗಳನ್ನು ನಿರ್ಬಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇಂದು ಮೂಡಾದಲ್ಲಿ ಅಗತ್ಯ ಸಿಬ್ಬಂದಿಗಳೇ ಇಲ್ಲ.TPM (Town planning Member), ATP (Aassistant Town Planner) ಟೈಪಿಸ್ಟ್, ಸರ್ವೇಯರ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಿಬ್ಬಂದಿಗಳು ಕೊರತೆ ಇದೆ. ಹೀಗಾದರೆ ಸಮಯಕ್ಕೆ ಸರಿಯಾಗಿ ಜನರ ಕೆಲಸಗಳು ನಡೆಯುವುದಾದರೂ ಹೇಗೆ?
ಇರುವ ಒಬ್ಬ TP (Town Planner) ತನಗೆ ವಹಿಸಿದ ಕೆಲಸಗಳನ್ನು ಮುಗಿಸಿಕೊಂಡು ಕಚೇರಿಗೆ ಬಂದರೆ, 50-60 ಜನ ಸಾಲಾಗಿ ನಿಂತಿರುತ್ತಾರೆ. ಅವರೆಲ್ಲರನ್ನೂ ಆ ಅಧಿಕಾರಿ ಆತ ಅಷ್ಟು ಸಣ್ಣ ಅವಧಿಯಲ್ಲಿ ವಿಚಾರಿಸಲು ಸಾಧ್ಯವೇ? ಹಾಗಾದರೆ ಸಾರ್ವಜನಿಕರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಎಷ್ಟು ದಿನ ಇದೇ ರೀತಿ ಬಂದು ನಿಲ್ಲಬೇಕು?
ಜನರ ಸಮಸ್ಯೆ ಇದ್ದರೆ ಅದು ಅವರ ಹಣೆಬರಹ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮೂಡಾದ ಆಡಳಿತ ವರ್ಗ ಜನಸಾಮಾನ್ಯರನ್ನು ಕಡೆಗಣಿಸಿ, ಅಧಿಕಾರದಲ್ಲಿರುವಷ್ಟು ದಿನ ಸಿಕ್ಕಷ್ಟು ಜೇಬು ತುಂಬಿಸಿಕೊಂಡು ಹೋಗುವುದೇ ನಮ್ಮ ಪರಮ ಗುರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಮಂಗಳೂರಿನ ಜನತೆಯ ದೌರ್ಭಾಗ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್, ರಮೇಶ್ ಹೆಗ್ಡೆ, ಪೂರ್ಣಿಮಾ, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.