ಮಹಾರಾಷ್ಟ್ರ: ನಾಗ್ಪುರ ಹಿಂಸಾಚಾರ ಪ್ರಕರಣದ ಆರೋಪಿ ಫಾಹೀಮ್ ಖಾನ್ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆಗೆ ಪೊಲೀಸರು ಮುಂದಾಗಿದ್ದಾರೆ. ಆತನ ಮನೆ ನೆಲಸಮಕ್ಕೆ ಬುಲ್ಡೋಜರ್‌ಗಳನ್ನು ತಂದು ನಿಲ್ಲಿಸಿದ್ದಾರೆ.
ಮಾರ್ಚ್ 17ರಂದು ನಾಗ್ಪುರಲ್ಲಿ ಔರಂಗಜೇಬನ ಸಮಾಧಿ ಕೆಡವುವಂತೆ ಒಂದು ಕೋಮಿಗೆ ಸೇರಿದ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ, ಒಂದು ಸಮುದಾಯದ ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಿಂಸಾಚಾರಕ್ಕೆ ಕಾರಣವಾಗಿತ್ತು.
ಮಾರ್ಚ್ 22ರಂದು ಈ ಹಿಂಸಾಚಾರ ಪ್ರಕರಣ ಕುರಿತು ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್ ಪ್ರಕರಣದ ಸಂಬಂಧ, ನಾಲ್ಕು ಎಫ್ಐಆರ್ ಆಗಿದ್ದು, 92 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಸಭೆ ನಡೆಸಿದ ಅವರು, "ಹಿಂಸಾಚಾರದ ಕುರಿತು ಪ್ರತಿಯೊಂದು ವಿವರವನ್ನು ಪರಿಶೀಲಿಸಿದೆ. ಹಿಂಸಾಚಾರದ ಸಮಯದಲ್ಲಿ ಉಂಟಾದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು. ಯಾವುದೇ ಹಾನಿ ಸಂಭವಿಸಿದ್ದರೂ ಅದನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು. ಅವರು ಹಣವನ್ನು ಪಾವತಿಸದಿದ್ದರೆ, ಅವರ ಆಸ್ತಿಯನ್ನು ಮಾರಾಟ ಮಾಡಲಾಗುತ್ತದೆ. ಅಗತ್ಯವಿರುವ ಕಡೆ ಬುಲ್ಡೋಜರ್‌ಗಳನ್ನು ಸಹ ಬಳಸಲಾಗುತ್ತದೆ" ತಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ನಾಗ್ಪುರ ಹಿಂಸಾಚಾರ ಘಟನೆಯನ್ನು ಎಡಿಟ್ ಮಾಡಿದ್ದಲ್ಲದೆ ಅದನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಹಿಂಸಾಚಾರಕ್ಕೆ ಆರೋಪಿ ಕಾರಣನಾಗಿದ್ದ ಎಂದು ಮಹಾರಾಷ್ಟ್ರ ಸೈಬರ್ ಘಟಕದ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಫಾಹೀಮ್ ಖಾನ್ ಪ್ರತಿಭಟನೆ ವಿಡಿಯೋ ಎಡಿಟ್ ಮಾಡುವ ಮೂಲಕ ಹಿಂಸಾಚಾರ ಭುಗಿಲೇಳಲು ಕಾರಣನಾಗಿದ್ದ ಎಂದು ಸೈಬರ್ ಘಟಕದ ಡಿಸಿಪಿ ಲೋಹಿತ್ ಮತಾನಿ ತಿಳಿಸಿದ್ದಾರೆ.
ನಾಗ್ಪುರ ನಗರಸಭೆ ಫಾಹೀಮ್ ಖಾನ್ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮುಂದಾಗಿದೆ. ನಗರಸಭೆ ತಂಡ ಆತನ ನಿವಾಸಕ್ಕೆ ಆಗಮಿಸಿದೆ. ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಖಾನ್ ಅವರ, ಮನೆ ನಿರ್ಮಾಣಕ್ಕೆ ಸರಿಯಾದ ಪ್ಲಾನ್ ಬಗ್ಗೆ ಅನುಮತಿ ಪಡೆದಿಲ್ಲ ಮತ್ತು ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಸಂಬಂಧ ಈ ಹಿಂದೆನೇ ಅನೇಕ ನೋಟಿಸ್ ಜಾರಿ ಮಾಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮನೆ ಕೆಡವಲು ಸಜ್ಜಾಗಿದ್ದೇವೆ ಎಂದರು.
ಆರೋಪಿ ಫಾಹೀಮ್ ಖಾನ್ನನ್ನು ಮಾರ್ಚ್ 19ರಂದು ಪೊಲೀಸರು ವಶಕ್ಕೆ ಪಡೆದಿದ್ದು, ಈತ ಮೈನಾರಿಟಿಸ್ ಡೆಮಾಕ್ರಟಿಕ್ ಪಕ್ಷದ ನಾಯಕನಾಗಿದ್ದಾನೆ.