ಮಂಗಳೂರು: ವಿಧಾನಸಭೆಯಲ್ಲಿ ಸಭಾದ್ಯಕ್ಷರ ಪೀಠಕ್ಕೆ ಹತ್ತಿ ದುಂಡಾವರ್ತನೆ ತೋರಿದ್ದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವುದು ಶಾಸಕರಿಗೆ ಶಿಕ್ಷೆ ಅಲ್ಲ. ಅವತ್ತು ನಡೆದ ಘಟನೆ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದ್ದು, ಶಾಸಕರು ತಮ್ಮ ವರ್ತನೆಯನ್ನು ತಿದ್ದಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮತ್ತೆ ಇಂತಹ ವರ್ತನೆ ಮುಂದುವರಿಸಿದರೆ ಒಂದು ವರ್ಷ ಅಮಾನತು ಅಥವಾ ಕಾಯ್ದೆಯಡಿ ಲಭ್ಯವಿರುವ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಕೊನೆಯ ದಿನದಂದು ಧನ ವಿನಿಯೋಗದ ಬಿಲ್ ಮಂಜೂರು ಮಾಡುವ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುವ ರೀತಿಯಲ್ಲಿ ಕೆಲ ಶಾಸಕರು ವರ್ತಿಸಿದ್ದು, ಸಂವಿಧಾನ ಪೀಠದ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರು ತಿಂಗಳು ಅಮಾನತು ಮಾಡಲಾಗಿದೆ. ಹಿಂದೆ ಇಂತಹ ಘಟನೆಗಳು ಆದರೂ ಈ ರೀತಿಯ ಶಿಕ್ಷೆ ನೀಡಲಾಗಿಲ್ಲ ಎಂದಾದರೆ ಅದು ಹಿಂದಿನ ಸ್ಪೀಕರ್‌ಗಳಿಗೆ ಆ ಧೈರ್ಯ ಇರಲಿಲ್ಲ ಎಂದು ಅರ್ಥ. ಅದರಿಂದಾಗಿಯೇ ಶಾಸಕರು ಏನೂ ಆಗದು ಎಂಬ ಧೈರ್ಯದಲ್ಲಿ ಈ ರೀತಿ ವರ್ತಿಸಿ ರಾಜ್ಯದ ಘನತೆಗೆ ಕುಂದು ತಂದಿದ್ದಾರೆ. ಧನ ವಿನಿಯೋಗದ ಬಿಲ್ ಮಂಜೂರು ಆಗುವುದು ಕೊನೆಯ ದಿನದಂದು. ಅದನ್ನು ತಡೆಯುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ. ಆ ಬಿಲ್‌ಗಳು ಮಂಜೂರು ಆಗದಿದ್ದರೆ, ವೇತನ ಪಾವತಿ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಮತ್ತೆ ಬಿಲ್ ಮಂಡಿಸಲೂ ಆಗುವುದಿಲ್ಲ. ಕೊನೆಯ ದಿನ ಈ ರೀತಿ ಮಾಡುವುದರಿಂದ ತಮಗೇನು ತೊಂದರೆ ಆಗದು ಎಂಬ ಕಲ್ಪನೆ ದೂರವಾಗಬೇಕು. ರಾಜ್ಯದಲ್ಲಿ ಸದನಕ್ಕಿಂತ ಸಂವಿಧಾನ ಸಂಸ್ಥೆ ಬೇರಿಲ್ಲ. ಅಧ್ಯಕ್ಷ ಪೀಠಕ್ಕಿಂತ ದೊಡ್ಡದು ಅಲ್ಲಿ ಬೇರೆ ಇಲ್ಲ ಎಂಬ ಅರಿವು ಶಾಸಕರಿಗೆ ಇರಬೇಕು. ಸಭಾಧ್ಯಕ್ಷನಾಗಿ ಈ ರೀತಿಯ ವರ್ತನೆ ಸಹಿಸಲು ಸಾಧ್ಯ ಇಲ್ಲ. ಹಾಗಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದರು.