ಮಹಾರಾಷ್ಟ್ರ: ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಂತರ ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಗಲಭೆಕೋರರ ಗುಂಪೊಂದು ಮಹಿಳಾ ಕಾನ್‌ಸ್ಟೆಬಲ್ ಜೊತೆ ಅನುಚಿತವಾಗಿ ವರ್ತಿಸಿ, ಆಕೆಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದ ಆರೋಪ ಕೇಳಿಬಂದಿದೆ.
ಗಲಭೆಯ ವೇಳೆ ಕತ್ತಲು ಆವರಿಸಿತ್ತು. ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಜೊತೆಗೆ ಗಲಭೆಕೋರರು ಅನುಚಿತವಾಗಿ ವರ್ತಿಸಿದ್ದಾರೆ. ಅವರ ದೇಹವನ್ನು ಸ್ಪರ್ಶಿಸಿದ್ದಾರೆ. ಆಕೆಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಲಾಗಿದೆ. ಅಶ್ಲೀಲ ಭಾಷೆ, ಸನ್ನೆ ಮಾಡಲಾಗಿದೆ. ಇತರ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೂ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಲಭೆಕೋರರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದುವರೆಗೆ 51 ಗಲಭೆಕೋರರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನಗರದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಇನ್ನೂ ಜಾರಿಯಲ್ಲಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ಸಿಂಗಾಲ್ ಅವರು ಮಾಹಿತಿ ನೀಡಿದ್ದಾರೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ತಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆರವು ಮಾಡಬೇಕು ಎಂಬ ಕೂಗು ಜೋರಾದ ಮಧ್ಯೆ, ಮೊಘಲ್ ದೊರೆಯ ಸಮಾಧಿಗೆ ಭದ್ರತೆ ಹೆಚ್ಚಿಸಲಾಗಿದೆ. ಜೊತೆಗೆ, ಅದನ್ನು ಡ್ರೋನ್ ನಿಷೇಧ ವಲಯ ಎಂದು ಘೋಷಿಸಲಾಗಿದೆ. ನಾಗ್ಪುರದಲ್ಲಿ ಹಿಂಸಾಚಾರ ನಡೆದ ಬಳಿಕ ಮೊಘಲ್ ದೊರೆಯ ಸಮಾಧಿಗೆ ರಾಜ್ಯ ಮೀಸಲು ಪೊಲೀಸ್ ಪಡೆಯ 50 ಸಿಬ್ಬಂದಿಯನ್ನು ರಕ್ಷಣೆಗೆ ನಿಯೋಜಿಸಲಾಗಿದೆ. 24 ಗಂಟೆಯೂ ಬಂದೋಬಸ್ತ್ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಿತ ಪ್ರದೇಶವಾಗಿರುವ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿಲೀಪ್ ಸ್ವಾಮಿ ಮಾತನಾಡಿ, "ವದಂತಿಗಳಿಗೆ ಕಿವಿಗೊಡಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಲ್ಲಿ ಕ್ರಮ ಜರುಗಿಸಲಾಗುವುದು. ಸಮಾಧಿಗೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡವು ದಿನದ 24 ಗಂಟೆಯೂ ಭದ್ರತೆ ನೀಡುತ್ತಿದೆ. ಡ್ರೋನ್ ನಿಷೇಧಿತ ವಲಯವನ್ನಾಗಿ ಘೋಷಿಸಲಾಗಿದೆ" ಎಂದು ಹೇಳಿದ್ದಾರೆ. ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯಲ್ಲಿ ಧರ್ಮದ ಪವಿತ್ರ ಗ್ರಂಥವನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿ ಹರಡಿ, ಒಂದು ಸಮುದಾಯದ ಗುಂಪು ನಾಗ್ಪುರದಲ್ಲಿ ಹಿಂಸಾಚಾರ ಆರಂಭಿಸಿದೆ. ಕಾರು, ಬೈಕ್, ಮನೆಗಳ ಮೇಲೆ ದಾಳಿ ಮಾಡಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದೆ. ಹಿಂಸಾಚಾರದ ನಂತರ ನಗರದ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ.