ನವದೆಹಲಿ: ತನ್ನ ದೇಶದ ವಿರುದ್ಧ ಭಯೋತ್ಪಾದನೆಗೆ ಭಾರತ ಬೆಂಬಲಿಸುತ್ತಿದೆ ಎಂಬ ಪಾಕಿಸ್ತಾನದ ಆರೋಪವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಭಾರತ, ಭಯೋತ್ಪಾದನೆಯನ್ನು ಮಟ್ಟ ಹಾಕಲು ವಿಫಲವಾಗಿರುವ ಹಾಗೂ ಸ್ವತಃ ತಾನೇ ಜಾಗತಿಕ ಭಯೋತ್ಪಾದನೆಗೆ ಕೇಂದ್ರಬಿಂದುವಾಗಿರುವ ಪಾಕಿಸ್ತಾನ ಮೊದಲಿಗೆ ತನ್ನೊಳಗೆ ಇಣುಕಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದೆ.
21 ಜನರ ಸಾವಿಗೆ ಕಾರಣವಾದ ಬಲೂಚಿಸ್ತಾನ್ ರೈಲು ಅಪಹರಣ ಘಟನೆಯ ನಂತರ, ಭಾರತ ತನ್ನ ದೇಶದ ವಿರುದ್ಧ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿತ್ತು.
"ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಸ್ಲಾಮಾಬಾದ್ ಆರೋಪಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
"ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳು ಮತ್ತು ವೈಫಲ್ಯಗಳಿಗೆ ಇತರರ ಮೇಲೆ ಬೆರಳು ತೋರಿಸುವ ಬದಲು ಆಂತರಿಕವಾಗಿ ನೋಡಿಕೊಳ್ಳಬೇಕು" ಎಂದು ಅವರು ಹೇಳಿದರು.