image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್​ಐ) ಮೇಲಿನ ನಿಷೇಧವನ್ನು ತೆರವು ಮಾಡಿದ ಕೇಂದ್ರ ಕ್ರೀಡಾ ಸಚಿವಾಲಯ

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್​ಐ) ಮೇಲಿನ ನಿಷೇಧವನ್ನು ತೆರವು ಮಾಡಿದ ಕೇಂದ್ರ ಕ್ರೀಡಾ ಸಚಿವಾಲಯ

ನವದೆಹಲಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ಸ್ವಜನಪಕ್ಷಪಾತ ಆರೋಪಗಳಿಂದಲೇ ಸುದ್ದಿಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್​ಐ) ಮೇಲಿನ ನಿಷೇಧವನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತೆಗೆದು ಹಾಕಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟದ (NSF) ಮಾನ್ಯತೆಯನ್ನು ಪುನಃಸ್ಥಾಪಿಸಿದೆ.

ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್​ ಅವರ ಮೇಲೆ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿ ತೀವ್ರ ಹೋರಾಟ ನಡೆಸಿದ್ದರು. ಇದು ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಬಳಿಕ ಒಕ್ಕೂಟಕ್ಕೆ ಚುನಾವಣೆ ನಡೆದರೂ, ಬ್ರಿಜ್​ಭೂಷಣ್​ ಆಪ್ತನನ್ನು ಆಯ್ಕೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಮತ್ತೆ ಹೋರಾಟ ನಡೆದಿತ್ತು. ಇದಾದ ಬಳಿಕ ಕೇಂದ್ರ ಕ್ರೀಡಾ ಸಚಿವಾಲಯವು ಒಕ್ಕೂಟದ ಮೇಲೆ ನಿಷೇಧ ಹೇರಿತ್ತು.

ಭವಿಷ್ಯದ ಕುಸ್ತಿ ಸ್ಪರ್ಧೆಗಳಿಗೆ ಆಯ್ಕೆ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಒಕ್ಕೂಟದ ಮೇಲಿದ್ದ ನಿಷೇಧದ ಹಿನ್ನೆಲೆಯಲ್ಲಿ ರೂಪಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯನ್ನು ರದ್ದು ಮಾಡಲು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್​ (ಐಒಎ) ಶಿಫಾರಸ್ಸು ಮಾಡಿತ್ತು. ಇದರಿಂದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ಭಾರತೀಯ ಒಕ್ಕೂಟದ ಮೇಲಿನ ನಿಷೇಧವನ್ನು 2024 ರ ಫೆಬ್ರವರಿಯಲ್ಲಿ ತೆಗೆದುಹಾಕಿತ್ತು.

ದೇಶದ ತಾರಾ ಕುಸ್ತಿಟಪುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಒಕ್ಕೂಟದ ವಿರುದ್ಧವೇ ಜಂಗೀಕುಸ್ತಿ ನಡೆಸಿದ್ದರು. ಇಬ್ಬರು ಮಹಿಳಾ ಪೈಲ್ವಾನ್​​ಗಳು ಒಕ್ಕೂಟದ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್​ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ಇದು ದೇಶದಲ್ಲಿ ಭಾರೀ ತಿಕ್ಕಾಟಕ್ಕೆ ಕಾರಣವಾಗಿತ್ತು. ಕುಸ್ತಿಪಟುಗಳ ಹೋರಾಟವು ರಾಜಕೀಯ ಸ್ವರೂಪ ಪಡೆದಿತ್ತು. ಇದರಿಂದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಪ್ರತಿಭಟನೆಗಳ ನಂತರ ನಿಗದಿತ ಸಮಯದೊಳಗೆ ಚುನಾವಣೆಗಳನ್ನು ಆಯೋಜಿಸಲು ವಿಫಲವಾದ ಕಾರಣ, ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ನಿಂದ ತಾತ್ಕಾಲಿಕ ಸಮಿತಿಯನ್ನು ರಚಿಸಲಾಯಿತು.

2023 ರ ಡಿಸೆಂಬರ್ ಕೊನೆಯಲ್ಲಿ ಚುನಾವಣೆಗಳು ನಡೆದು, ಸಂಜಯ್ ಸಿಂಗ್ ಅವರು WFI ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, ಕುಸ್ತಿಪಟುಗಳು ಅವರ ಆಯ್ಕೆಗೂ ವಿರೋಧ ವ್ಯಕ್ತಪಡಿಸಿದರು. ಸಂಜಯ್​ ಸಿಂಗ್​ ಅವರು ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಆಪ್ತರು. ಈ ಆಯ್ಕೆ ರದ್ದು ಮಾಡಬೇಕು ಎಂದು ಪಟ್ಟು ಹಿಡಿದರು. ಇದರ ಬೆನ್ನಲ್ಲೇ, ಸಂಜಯ್ ಅವರು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ U-15 ಮತ್ತು U-20 ರಾಷ್ಟ್ರೀಯ ಕುಸ್ತಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದಾಗಿ ಘೋಷಿಸಿದರು.

Category
ಕರಾವಳಿ ತರಂಗಿಣಿ