ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೂಂದು ವರ್ಷದಲ್ಲಿ ರಾಜ್ಯದಲ್ಲಿ ಜಲ ವಿಮಾನ ಹಾರಾಟ ನಡೆಸಲಿದೆ. ಇದಕ್ಕಾಗಿ ಈಗಾಗಲೇ ರಾಜ್ಯದ ನಾಲ್ಕು ಕಡೆ ವಾಟರ್ ಏರೋಡ್ರೋಮ್ ನಿರ್ಮಾಣಕ್ಕಾಗಿ ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ ರಾಜ್ಯದಲ್ಲಿ ಯೋಜನೆ ಅನುಷ್ಠಾನ ಸ್ವಲ್ಪ ವಿಳಂಬವಾಗುತ್ತಿದ್ದು, ಇದೀಗ ಯೋಜನೆಗೆ ಒಲವು ಹೊಂದಿರುವ ಎಲ್ಲಾ ಏರ್ ಆಪರೇಟರ್ಸ್ ಜೊತೆ ಸಭೆ ನಡೆಸಿ, ವಾಟರ್ ಏರೋಡ್ರೋಮ್ ತ್ವರಿತ ಜಾರಿಗೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಂದಾಗಿದೆ.
ವಾಟರ್ ಏರೋಡ್ರೋಮ್ ಎಂದರೆ ನೀರಿನ ಮೇಲೆ ಲಘು ವಿಮಾನವನ್ನು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವ ಸ್ಥಳ. ಜಲ ವಿಮಾನ ಪ್ರವಾಸೋದ್ಯಮದ ಭಾಗವಾಗಿ ರಾಜ್ಯದಲ್ಲಿ ಈ ವಾಟರ್ ಏರೋಡ್ರೋಮ್ ಆರಂಭಿಸಲು ಈಗಾಗಲೇ ಪ್ರಾಥಮಿಕ ಪ್ರಕ್ರಿಯೆಗಳು ಪೂರ್ಣವಾಗಿದೆ. ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ದೇಶದ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ವಾಟರ್ ಏರೋಡ್ರೋಮ್ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ವಾಟರ್ ಏರೋಡ್ರೋಮ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ನೀರಿನ ಮೇಲೆ ಲಘು ವಿಮಾನ ಲ್ಯಾಂಡಿಂಗ್ ಹಾಗೂ ಟೇಕಾಫ್ಗೆ ಅನುವು ಮಾಡುವ ಏರೋಡ್ರೋಮ್ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಜಲ ವಿಮಾನ (ಸೀ ಪ್ಲೇನ್) ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ಹಲವೆಡೆ ವಾಟರ್ ಏರೋಡ್ರೋಮ್ ನಿರ್ಮಿಸಲು ತೀರ್ಮಾನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ 2022ರಲ್ಲಿ ರಾಜ್ಯದ ಒಂಬತ್ತು ಕಡೆ ಏರೋಡ್ರೋಮ್ ನಿರ್ಮಿಸಲು ಚಿಂತನೆ ನಡೆಸಿತ್ತು. ಅದರಂತೆ ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕಬಿನಿ ಜಲಾಶಯ, ಲಿಂಗನಮಕ್ಕಿ, ಆಲಮಟ್ಟಿ ಹಾಗೂ ಹಿಡಕಲ್ ಜಲಾಶಯದಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣದ ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿತ್ತು.
ವಾಟರ್ ಏರೋಡ್ರೋಮ್ ಕನಿಷ್ಠ ವೆಚ್ಚದಲ್ಲಿ ನಿರ್ಮಿಸಬಹುದಾಗಿದ್ದು, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಇದರ ಮೂಲಕ ಜನಪ್ರಿಯ ಪ್ರವಾಸಿ ತಾಣಗಳಿಗೆ ಸಂಪರ್ಕ ಸಾಧಿಸಬಹುದಾಗಿದೆ. ಅವುಗಳನ್ನು ಜಲ ವಿಮಾನ ಕಾರ್ಯಾಚರಣೆಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಾಟರ್ ಏರೋಡ್ರೋಮ್ ಮೂಲಕ ಜಲ ವಿಮಾನ, ತೇಲುವ ವಿಮಾನಗಳು ನೀರಿನ ಮೇಲೆ ಲ್ಯಾಂಡಿಂಗ್ ಹಾಗೂ ಟೇಕಾಫ್ ಮಾಡುತ್ತವೆ. ಈ ಜಲ ವಿಮಾನಗಳು ಸಾಮಾನ್ಯವಾಗಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತವೆ.
ಇದೀಗ ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲು ಸ್ಥಳವನ್ನು ಅಂತಿಮಗೊಳಿಸಿ ಕರ್ನಾಟಕ ಜಲಸಾರಿಗೆ ಮಂಡಳಿಯು ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದೆ. ಅದರಂತೆ ಸುಪಾ ಅಣೆಕಟ್ಟು ಬಳಿಯ ಗಣೇಶಗುಡಿ, ಕಬಿನಿ ಅಣೆಕಟ್ಟು, ಮಂಗಳೂರು, ಲಿಂಗನಮಕ್ಕಿ ಜಲಾಶಯದ ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲು ಯೋಜಿಸಲಾಗಿದೆ. 2024ರಲ್ಲಿ ಈ ನಾಲ್ಕು ಸ್ಥಳಗಳನ್ನು ಅಂತಿಮಗೊಳಿಸಿ, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಕರ್ನಾಟಕ ಜಲಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡಾನ್ ಯೋಜನೆಯಲ್ಲಿ ನಾಲ್ಕು ಪ್ರಸ್ತಾಪಿತ ಸ್ಥಳಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪಿಪಿಪಿ ಆಧಾರದಲ್ಲಿ ಈ ಏರೋಡ್ರೋಮ್ ಅನ್ನು ನಿರ್ಮಿಸಲಾಗುವುದು ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆ ಅನುಷ್ಠಾನ ಸ್ವಲ್ಪ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದೀಗ ಪ್ರಕ್ರಿಯೆಗೆ ವೇಗ ನೀಡಿ, ಮುಂದಿನ ವರ್ಷ ಕರ್ನಾಟಕದಲ್ಲಿ ಜಲವಿಮಾನ ಹಾರಾಟ ಕಾಣಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.