ಹೈದರಾಬಾದ್: ದಾನಿಗಳ ಹೃದಯ ಸಾಗಾಟ ಮತ್ತು ಜೀವ ಉಳಿಸುವ ಉದ್ದೇಶದಿಂದ ಹೈದರಾಬಾದ್ ಮೆಟ್ರೋ ರೈಲು ದಾಖಲೆ ನಿರ್ಮಾಣ ಮಾಡಿದೆ. ತುರ್ತು ವೈದ್ಯಕೀಯ ಉದ್ದೇಶದಿಂದ ಮೆಟ್ರೋ ರೈಲು ಕೇವಲ 12 ನಿಮಿಷದಲ್ಲಿ 13 ಕಿ.ಮೀ ಪ್ರಯಾಣ ಮಾಡಿ ಒಂದು ಜೀವ ಉಳಿಸುವ ಕೆಲಸ ಮಾಡಿದೆ.
ಎಲ್ಬಿ ನಗರ್ ಕಾರಿಡಾರ್ನ ಕಮಿನೆನಿ ಆಸ್ಪತ್ರೆಯಿಂದ ಸಿಕಂದ್ರಬಾದ್ನ ರಸೋಲ್ಪುರದಲ್ಲಿನ ಕಿಮ್ಸ್ ಆಸ್ಪತ್ರೆಗೆ ಶುಕ್ರವಾರ ಜೀವಂತ ಹೃದಯ ಸಾಗಣೆ ಮಾಡಲಾಗಿದೆ. ಇದಕ್ಕಾಗಿ 9.16ಕ್ಕೆ ವಿಶೇಷ ಗ್ರೀನ್ ಚಾನಲ್ ಮೂಲಕ 11 ನಿಲ್ದಾಣಗಳಿರುವ ಮಾರ್ಗದಲ್ಲಿ ಕೇವಲ 12 ನಿಮಿಷಗಳಲ್ಲಿ ಸಾಗಣೆ ಮಾಡಿ ವಿಕ್ರಮ ಮೆರೆಯಲಾಗಿದೆ. ಇದಕ್ಕಾಗಿ ಮೆಟ್ರೋ ಅಧಿಕಾರಿಗಳು ವೇಗದ ಕೆಲಸ ಮಾಡಿ, ಹೃದಯ ಸಾಗಣೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಈ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಹೈದರಾಬಾದ್ ಮೆಟ್ರೋ ರೈಲು, ವೈದ್ಯಕೀಯ ವೃತ್ತಿಪರರು ಮತ್ತು ಆಸ್ಪತ್ರೆ ಆಡಳಿತದಿಂದ ಈ ರೀತಿಯ ಅದ್ಬುತ ಕಾರ್ಯವೊಂದು ನಡೆದಿದೆ. ನಿರ್ಣಾಯಕ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ, ಇಂತಹ ಸಹಯೋಗದ ಪ್ರಯತ್ನ ಅಗತ್ಯ ಎಂಬುದನ್ನು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.