ನವದೆಹಲಿ : ದೇಶದಲ್ಲಿ 15 ಸಾವಿರಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 10 ಲಕ್ಷಕ್ಕೂ ಅಧಿಕ ಜನರಿಗೆ ಅಗ್ಗದ ಔಷಧಿಗಳು ಲಭ್ಯವಾಗುತ್ತಿವೆ. ಇದರಿಂದ 30 ಸಾವಿರ ಕೋಟಿ ರೂಪಾಯಿಗಳಷ್ಟು ಉಳಿತಾಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವ ಜೆ.ಪಿ. ನಡ್ಡಾ ಅವರು ತಿಳಿಸಿದ್ದಾರೆ.
ಜನೌಷಧ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಕೇಂದ್ರ ಸಚಿವ, "ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಲ್ಲಿ ಪ್ರಾರಂಭಿಸಲಾಗಿರುವ ಭಾರತೀಯ ಜನೌಷಧಿ ಯೋಜನೆಯು 'ಉತ್ತಮ, ಕಡಿಮೆ ಬೆಲೆ' ಘೋಷಣೆಯೊಂದಿಗೆ ಆರೋಗ್ಯ ರಕ್ಷಣೆಯಲ್ಲಿ ಪರಿವರ್ತನೆ ತಂದಿದೆ. ದೇಶದಲ್ಲಿನ 15 ಸಾವಿರಕ್ಕೂ ಹೆಚ್ಚು ಜನೌಷಧ ಕೇಂದ್ರಗಳಲ್ಲಿ ಶೇಕಡಾ 50-90 ರಷ್ಟು ಅಗ್ಗದ ಬೆಲೆಯಲ್ಲಿ ಔಷಧ ಸಿಗುತ್ತಿವೆ. ಇದು ಉಳಿತಾಯಕ್ಕೂ ಕಾರಣವಾಗಿದೆ ಎಂದು ಹೇಳಿದರು.
ಜನೌಷಧಿ ಕೇಂದ್ರಗಳಲ್ಲಿ 2,047 ವಿಧದ ಔಷಧಗಳು ಮತ್ತು 300 ಶಸ್ತ್ರಚಿಕಿತ್ಸಾ ವಸ್ತುಗಳು ಸಿಗುತ್ತಿವೆ. ಉಚಿತ ಔಷಧಗಳಿಗಿಂತ ಭಿನ್ನವಾಗಿ ಕಡಿಮೆ ದರದಲ್ಲಿ ಗುಣಮಟ್ಟದ ಈ ಯೋಜನೆ ಜಾರಿಯಲ್ಲಿದೆ. 2027 ರ ವೇಳೆಗೆ ದೇಶದಲ್ಲಿ 25 ಸಾವಿರ ಜನೌಷಧ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ. ಈ ವರ್ಷ 5 ಸಾವಿರ ಕೇಂದ್ರ ತೆರೆಯಲಿವೆ ಎಂದು ಅವರು ತಿಳಿಸಿದರು.