ಅಮೆರಿಕ: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾಗೆ ಭಾರೀ ಹಿನ್ನಡೆ ಉಂಟಾಗಿದೆ. ತನ್ನನ್ನು ಭಾರತಕ್ಕೆ ಹಸ್ತಾಂತರಿಸಲು ಕೂಡಲೇ ತಡೆ ನೀಡಬೇಕು ಎಂದು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಒಂಬತ್ತನೇ ಸರ್ಕ್ಯೂಟ್ನ ನ್ಯಾಯಾಧೀಶ ಎಲೆನಾ ಕಗನ್ ಅವರು ರಾಣಾ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು. ಇದರಿಂದ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಯಾವುದೇ ಅಡ್ಡಿ ಇಲ್ಲ ಎಂಬುದನ್ನು ಕೋರ್ಟ್ ತಿಳಿಸಿದೆ.
ತಹವ್ವುರ್ ರಾಣಾನನ್ನು ನಮಗೆ ಹಸ್ತಾಂತರಿಸಬೇಕು ಎಂದು ಭಾರತ ಕೋರಿತ್ತು. ಇದಕ್ಕೆ ಅಮೆರಿಕ ಸಮ್ಮತಿಸಿತ್ತು. ಇದರ ಬೆನ್ನಲ್ಲೇ, ಜೈಲಿನಲ್ಲಿರುವ ರಾಣಾ, ನಾನು ಪಾಕಿಸ್ತಾನಿ ಮೂಲದವನಾಗಿರುವ ಕಾರಣ ಭಾರತಕ್ಕೆ ನೀಡಿದಲ್ಲಿ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಆರೋಪಿಸಿ, ಹಸ್ತಾಂತರಕ್ಕೆ ತುರ್ತು ತಡೆ ನೀಡಬೇಕು ಎಂದು ಕೋರಿದ್ದ.
ಭಾರತದಲ್ಲಿ ನನಗೆ ಚಿತ್ರಹಿಂಸೆ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಆಧಾರಗಳಿವೆ. ಜೊತೆಗೆ ನಾನು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಭಾರತದ ಅಧಿಕಾರಿಗಳ ಕೈಯಲ್ಲಿ ನಾನು ಸಾಯುವ ಸಾಧ್ಯತೆ ಹೆಚ್ಚು ಎಂದು ಆತ ಅರ್ಜಿಯಲ್ಲಿ ದೂರಿದ್ದ. ಆದರೆ, ಇದ್ಯಾವುದನ್ನೂ ಅಮೆರಿಕದ ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ.
ಫೆಬ್ರವರಿ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಘೋಷಿಸಿದರು. ಆತ ತನ್ನ ಮೇಲಿರುವ ಆರೋಪದ ಬಗ್ಗೆ ತನಿಖೆ ಎದುರಿಸಬೇಕು ಎಂದು ಹೇಳಿದ್ದರು.
ತಹವ್ವುರ್ ರಾಣಾ ಪಾಕಿಸ್ತಾನದ ಮೂಲದ ಕೆನಡಾ ಪ್ರಜೆಯಾಗಿದ್ದಾನೆ. ಸದ್ಯ ಆತ ಲಾಸ್ ಏಂಜಲೀಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.