ಲಂಡನ್: "ಪಿಒಕೆಯಿಂದ (ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನ ಹೊರನಡೆದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತದೆ" ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ಕಾಶ್ಮೀರ ಸಮಸ್ಯೆ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ಸಂಬಂಧವನ್ನು ಬಳಸಬಹುದೇ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಲಂಡನ್‌ನ ಚಾಥಮ್ ಹೌಸ್ ಥಿಂಕ್ ಟ್ಯಾಂಕ್‌ನಲ್ಲಿ 'ಭಾರತದ ಉದಯ ಮತ್ತು ಜಗತ್ತಿನಲ್ಲಿ ಅದರ ಪಾತ್ರ' ಎಂಬ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಜೈಶಂಕರ್ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
"ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿರುವ ಭಾಗವನ್ನು ಹಿಂದಿರುಗಿಸುವಂತೆ ನಾವು ಕಾಯುತ್ತಿದ್ದೇವೆ. ಅದು ನಡೆದರೆ ಕಾಶ್ಮೀರ ಸಮಸ್ಯೆ ಪರಿಹಾರವಾದಂತೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ" ಎಂದು ಜೈಶಂಕರ್ ಒತ್ತಿ ಹೇಳಿದರು.
"ಕಾಶ್ಮೀರ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ನಾವಿಟ್ಟ ಮೊದಲ ಹೆಜ್ಜೆ ಸಂವಿಧಾನದ ವಿಶೇಷ ಸ್ಥಾನಮಾನವಾದ ವಿಧಿ 370 ಅನ್ನು ತೆಗೆದು ಹಾಕಿರುವುದು. ಎರಡನೇ ಹಂತದಲ್ಲಿ, ಕಾಶ್ಮೀರದ ಬೆಳವಣಿಗೆ, ಆರ್ಥಿಕ ಚಟುವಟಿಕೆ ಹಾಗೂ ಸಾಮಾಜಿಕ ನ್ಯಾಯದ ಮರುಸ್ಥಾಪನೆ. ಮೂರನೇ ಹಂತದಲ್ಲಿ, ಇತ್ತೀಚಿಗೆ ನಡೆದ ಯಶಸ್ವಿಯಾಗಿ ಚುನಾವಣೆಗಳು ನಡೆದಿರುವುದು ಮತ್ತು ಹೆಚ್ಚು ಮತದಾರರು ಭಾಗಿಯಾಗಿರುವುದು ಸೇರಿದೆ" ಎಂದರು.
ಇದೇ ವೇಳೆ, ಚೀನಾದೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಸಚಿವರು, "ಭಾರತ ಚೀನಾದೊಂದಿಗೆ ವಿಶಿಷ್ಟ ಸಂಬಂಧ ಹೊಂದಿದೆ. ನಮ್ಮ ಹಿತಾಸಕ್ತಿ ಹಾಗೂ ನಮ್ಮಿಬ್ಬರ ಕೆಲಸದ ಸೂಕ್ಷ್ಮತೆಗಳನ್ನು ಗುರುತಿಸುವ, ಗೌರವಿಸುವ ಸಂಬಂಧವನ್ನು ನಾವು ಬಯಸುತ್ತೇವೆ" ಎಂದು ತಿಳಿಸಿದರು.
ಅಮೆರಿಕದ ಹೊಸ ಸರ್ಕಾರದ ಮೊದಲ ವಾರದಲ್ಲಿ ಟ್ರಂಪ್ ಕಠಿಣ ಸುಂಕದ ಕುರಿತ ಪ್ರಶ್ನೆಗೆ, "ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ಭಾರತದ ಹಿತಾಸಕ್ತಿಗಳಿಗೆ ಸರಿಹೊಂದುವ ಬಹುಧ್ರುವೀಯತೆಯತ್ತ ಸಾಗುತ್ತಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಗತ್ಯವನ್ನು ಉಭಯ ರಾಷ್ಟ್ರಗಳೂ ಒಪ್ಪಿಕೊಂಡಿವೆ" ಎಂದರು.
"ಟ್ರಂಪ್ ಅವರ ದೃಷ್ಟಿಕೋನದಲ್ಲಿ ನಾವು ಹೊಂದಿರುವ ದೊಡ್ಡ ಉದ್ಯಮ ಹಂಚಿಕೆ ಎಂದರೆ ಅದು ಕ್ವಾಡ್(QUAD) ಆಗಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ನ್ಯಾಯಯುತ ಪಾವತಿಯನ್ನು ಅರ್ಥೈಸಿಕೊಂಡಿದ್ದೇವೆ" ಎಂದರು.