ನವದೆಹಲಿ : ಯಾರನ್ನಾದರೂ 'ಮಿಂಯಾ - ಟಿಂಯಾ' ಅಥವಾ 'ಪಾಕಿಸ್ತಾನಿ' ಎಂದು ಕರೆಯುವುದು ಸೂಕ್ತವಲ್ಲವಾದರೂ ಅದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 298 ರ ಅಡಿ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಜಾರ್ಖಂಡ್ನ ಬೊಕಾರೊ ನಿವಾಸಿ ಹರಿ ನಂದನ್ ಸಿಂಗ್ ವಿರುದ್ಧ ಈ ಬಗ್ಗೆ ದಾಖಲಾದ ಪ್ರಕರಣವನ್ನು ರದ್ದುಗೊಳಿಸಿತು.
ಉರ್ದು ಭಾಷಾಂತರಕಾರ ಮುಹಮ್ಮದ್ ಶಮೀಮುದ್ದೀನ್ ಎಂಬುವರು ಪ್ರಕರಣ ದಾಖಲಿಸಿದ್ದರು. ಹರಿ ನಂದನ್ ಸಿಂಗ್ ಅವರು ಈ ಪದಗಳನ್ನು ಬಳಸಿ ತನಗೆ ಅವಹೇಳನ ಮಾಡಿದ್ದು, ಇದು ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಆರೋಪಿಸಿದ್ದರು. ಆರ್ಟಿಐ ಅರ್ಜಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ಸಿಂಗ್ ಅವರನ್ನು ಭೇಟಿಯಾದಾಗ ಈ ಘಟನೆ ನಡೆದಿದೆ ಎಂದು ಶಮೀಮುದ್ದೀನ್ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಜುಲೈ 2021 ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನನ್ನು ಕರ್ತವ್ಯದಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 298 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಪದಗಳು) ಮತ್ತು 504 (ಶಾಂತಿ ಉಲ್ಲಂಘನೆ ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಅಡಿ ಸಮನ್ಸ್ ಹೊರಡಿಸಿದ್ದರು.