image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೃಷ್ಟಿಹೀನ ಅಭ್ಯರ್ಥಿಗಳು ನ್ಯಾಯಾಂಗ ಇಲಾಖೆಯಲ್ಲಿ ನೇಮಕಾತಿಗೆ ಅರ್ಹರು : ಸುಪ್ರೀಂ ಕೋರ್ಟ್

ದೃಷ್ಟಿಹೀನ ಅಭ್ಯರ್ಥಿಗಳು ನ್ಯಾಯಾಂಗ ಇಲಾಖೆಯಲ್ಲಿ ನೇಮಕಾತಿಗೆ ಅರ್ಹರು : ಸುಪ್ರೀಂ ಕೋರ್ಟ್

ನವದೆಹಲಿ: ದೃಷ್ಟಿಹೀನ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗಳ ಅಡಿಯಲ್ಲಿ ಉದ್ಯೋಗಗಳ ನೇಮಕಾತಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಅಂಗವೈಕಲ್ಯವಿದೆ ಎಂಬ ಒಂದೇ ಕಾರಣಕ್ಕಾಗಿ ಯಾವುದೇ ಅಭ್ಯರ್ಥಿಗೆ ನೇಮಕಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಮಹಾದೇವನ್, ಹಕ್ಕು-ಆಧರಿತ ವಿಧಾನದ ಅಡಿಯಲ್ಲಿ ನ್ಯಾಯಾಂಗ ಇಲಾಖೆಯಲ್ಲಿನ ಉದ್ಯೋಗ ನೇಮಕಾತಿಗಳಲ್ಲಿ ಅಂಗವಿಕಲರಿಗೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದರು. ಇದಲ್ಲದೆ ಅಂತರ್ಗತ ಚೌಕಟ್ಟನ್ನು ಒದಗಿಸಲು ಸರ್ಕಾರದ ಪರವಾಗಿ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕಟ್ ಆಫ್ ಅಥವಾ ನಿಯಮಾವಳಿಗಳ ಮುಖಾಂತರ ಅಂಗವಿಕಲ ವ್ಯಕ್ತಿಗಳನ್ನು ಹೊರಗಿಡಲು ಕಾರಣವಾಗುವಂಥ ಪರೋಕ್ಷ ತಾರತಮ್ಯಗಳನ್ನು ನಿವಾರಿಸಿ, ಸಮಾನತೆಯನ್ನು ತರಲು ಮಧ್ಯ ಪ್ರವೇಶಿಸುವುದು ಅಗತ್ಯ ಎಂದು ನ್ಯಾಯಮೂರ್ತಿ ಮಹಾದೇವನ್ ತಿಳಿಸಿದರು.

"ದೃಷ್ಟಿಹೀನ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗಳ ಅಡಿಯಲ್ಲಿನ ಹುದ್ದೆಗಳ ಆಯ್ಕೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಮತ್ತು ದೃಷ್ಟಿಹೀನ ಮತ್ತು ಕಡಿಮೆ ದೃಷ್ಟಿಯ ಅಭ್ಯರ್ಥಿಗಳನ್ನು ನ್ಯಾಯಾಂಗ ಸೇವೆಗಳ ನೇಮಕಾತಿಯಿಂದ ಹೊರಗಿಡಲು ಕಾರಣವಾಗುವ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ ನಿಯಮ 6 (ಎ) ಅನ್ನು ರದ್ದುಪಡಿಸಲಾಗಿದೆ" ಎಂದು ಮಹಾದೇವನ್ ಹೇಳಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಪ್ರಕಾರ ಅವರ ಅರ್ಹತೆಯನ್ನು ನಿರ್ಣಯಿಸುವ ಸಮಯದಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ವಸತಿ ಸೌಕರ್ಯವನ್ನು ಒದಗಿಸಬೇಕು ಎಂದು ನ್ಯಾಯಪೀಠ ಹೇಳಿತು. ನ್ಯಾಯಾಲಯವು ಇದನ್ನು ಅತ್ಯಂತ ಪ್ರಮುಖ ಪ್ರಕರಣವೆಂದು ಪರಿಗಣಿಸಿದೆ ಎಂದು ಹೇಳಿದ ನ್ಯಾಯಾಧೀಶರು, ನಾವು ಸಾಂವಿಧಾನಿಕ ಚೌಕಟ್ಟು ಮತ್ತು ಸಾಂಸ್ಥಿಕ ಅಂಗವೈಕಲ್ಯ ನ್ಯಾಯಶಾಸ್ತ್ರವನ್ನು ಸಹ ಪರಿಶೀಲನೆಗೊಳಪಡಿಸಿದ್ದೇವೆ ಎಂದು ನುಡಿದರು.

ನನ್ನ ಸಹೋದರ ನ್ಯಾಯಮೂರ್ತಿ ಮಹಾದೇವನ್ ಬರೆದ ಈ ತೀರ್ಪು ಐತಿಹಾಸಿಕವಾಗಿದೆ ಮತ್ತು ಇದನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿಯೇ ಹೇಳುತ್ತಿದ್ದೇನೆ ಎಂದು ನ್ಯಾಯಮೂರ್ತಿ ಪರ್ಡಿವಾಲಾ ಹೇಳಿದರು.

Category
ಕರಾವಳಿ ತರಂಗಿಣಿ