image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ‌ ಹೀಟ್‌ವೇವ್ ಆತಂಕ ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗರೂಕತೆ ಹೇಗೆ?

ಕರಾವಳಿಯಲ್ಲಿ‌ ಹೀಟ್‌ವೇವ್ ಆತಂಕ ಆರೋಗ್ಯದ ಮೇಲೆ ದುಷ್ಪರಿಣಾಮ- ಮುಂಜಾಗರೂಕತೆ ಹೇಗೆ?

ಮಂಗಳೂರು: ಕರಾವಳಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಗಾಳಿ ಬೀಸುತ್ತಿದ್ದು, ಇನ್ನೂ ಒಂದೆರಡು ದಿನಗಳ ಕಾಲ ಇರಲಿದೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. 

ದ.ಕ.ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೀಟ್ ವೇವ್ ಸ್ಟೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಈ ಬಗ್ಗೆ  ಮುಂಜಾಗರುಕತೆ ವಹಿಸಬೇಕಾಗಿದೆ.

ವಿಶೇಷವಾಗಿ ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಮಧ್ಯಾಹ್ನ 12 ರಿಂದ 3ರವರೆಗೆ ಹೊರಗಡೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೊಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಕುಡಿಯಬಾರದು.

ಮಕ್ಕಳನ್ನು ಬಿಸಿಲಿನಲ್ಲಿ ಆಟವಾಡದಂತೆ ನೋಡಿಕೊಳ್ಳುವುದು ಉತ್ತಮ. ಆದ್ದರಿಂದ ಈ ಬಗ್ಗೆ ಶಾಲೆಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ನೀಡಲು ಸುತ್ತೋಲೆಗಳನ್ನು ಕಳುಹಿಸಲಾಗುತ್ತದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದರು.

ಅತಿಯಾದ ಸುಸ್ತಾಗುವಿಕೆ, ಅತಿಯಾದ ಬಾಯಾರಿಕೆ, ಮಾನಸಿಕ ಏರುಪೇರು, ಮಾಂಸಖಂಡಗಳ, ಸ್ನಾಯುಗಳ ಸೆಳೆತ ಬಿಸಿಲಾಘಾತದ ಲಕ್ಷಣಗಳು. ಇನ್ನು ಹೆಚ್ಚಿನ ಹೊತ್ತು ಬಿಸಿಲಿಲ್ಲಿದ್ದರೆ ಹೀಟ್ ಸ್ಟ್ರೋಕ್ ಆಗಬಹುದು. ಇದರಿಂದ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದರು.

ಬಿಸಿಲಾಘಾತಕ್ಕೆ ಒಳಗಾದ ವ್ಯಕ್ತಿಯ ಚಿಕಿತ್ಸೆಗಾಗಿ ಸಲಹೆಗಳು:

ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ ಅಥನಾ ನೆರಳಿನ ಪ್ರದೇಶಕ್ಕೆ ರವಾನಿಸಬೇಕು. ಅವರನ್ನು ಒಮ್ಮೆ ಬಟ್ಟೆಯಿಂದ ಒರಸಿ, ಆಗಾಗ ದೇಹಕ್ಕೆ ನೀರು ಸಿಂಪಡಿಸಬೇಕು. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಬೇಕು. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ಅವರಿಗೆ ORS, ನಿಂಬೆ ಶರಬತ್ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಬೇಕು. ಒಟ್ಟಿನಲ್ಲಿ ಬಿಸಿಗಾಳಿಯ ದುಷ್ಪರಿಣಾಮದಿಂದ ತಪ್ಪಿಸಲು ಮಧ್ಯಾಹ್ನದ ಹೊತ್ತು ಬಿಸಿಲಿನಲ್ಲಿ ಇರದೆ ಸಾಧ್ಯವಾದಷ್ಟು ನೆರಳಿನ ಪ್ರದೇಶದಲ್ಲಿ ಇರುವುದು ಉತ್ತಮ.

 

 

Category
ಕರಾವಳಿ ತರಂಗಿಣಿ