ಹುಬ್ಬಳ್ಳಿ: ಕ್ಯಾನ್ಸರ್ ಕಾಯಿಲೆಗೆ ಹುಬ್ಬಳ್ಳಿ (ಕೆಎಂಸಿಆರ್ಐ) ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಸೂಕ್ತವಾದ ಚಿಕಿತ್ಸೆ ಸಿಗುತ್ತಿದೆ. ಆದರೆ, ಪರಿಪೂರ್ಣ ಚಿಕಿತ್ಸೆ ಪಡೆದು ಗುಣಮುಖರಾಗಲು ರೋಗಿಗಳು ಬೆಂಗಳೂರಿನಂತಹ ದೂರದ ಊರಿನ ಬೇರೆ ಆಸ್ಪತ್ರೆಗಳಿಗೆ ಅಲೆಯಬೇಕಿದೆ.
ಹೀಗಾಗಿ ಕೆ.ಎಂ.ಸಿ.ಆರ್ಐನಲ್ಲಿ ಒಂದೇ ಸೂರಿನಡಿ ಕ್ಯಾನ್ಸರ್ಗೆ ಅಗತ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಪ್ರಸಕ್ತ ವರ್ಷದ ರಾಜ್ಯ ಬಜೆಟ್ನಲ್ಲಿ ಆದ್ಯತೆ ದೊರೆಯುವ ವಿಶ್ವಾಸವಿದೆ.
ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬೆಳಗಾವಿ, ಕಾರವಾರ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಎಂಸಿಆರ್‌ಐನಲ್ಲಿ ಇರುವ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಬಂದು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಆದರೆ, ಸೌಲಭ್ಯ ಕೊರತೆಯಿಂದ ರೋಗಿಗಳಿಗೆ ಗುಣಮಟ್ಟದ ಹಾಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.
ಈ ಕುರಿತಂತೆ ಕೆಎಂಸಿಆರ್ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಪ್ರತಿ ವರ್ಷವೂ 7,000ಕ್ಕೂ ಅಧಿಕ ಕ್ಯಾನ್ಸರ್ ಪೀಡಿತರು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. 3,000ದಷ್ಟು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 500 ಜನರಿಗೆ ಮೇಜರ್ ಹಾಗೂ 700 ಜನರಿಗೆ ಮೈನರ್ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕೆಎಂಸಿಆರ್ಐ ಕ್ಯಾನ್ಸರ್ ಚಿಕಿತ್ಸೆ ವಿಭಾಗದಲ್ಲಿ ಮೂವರು ಕ್ಯಾನ್ಸರ್ ಶಸ್ತ್ರಚಿಕಿತ್ಸಕರು, ಇಬ್ಬರು ವಿಕಿರಣ(ರೇಡಿಯೇಶನ್) ತಜ್ಞರು, ಪಾಳಿಯ ಆಧಾರದಲ್ಲಿ ತಲಾ ನಾಲ್ವರು ನರ್ಸ್‌ಗಳು ಹಾಗೂ ಮೂವರು ವಾರ್ಡ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ".
"ಕೇವಲ 50 ಹಾಸಿಗೆ ಸಾಮರ್ಥ್ಯದ ಈ ಚಿಕಿತ್ಸಾ ವಿಭಾಗಕ್ಕೆ ಅಧಿಕ ಸಂಖ್ಯೆಯ ರೋಗಿಗಳು ಬರುವುದರಿಂದ ಇತರ ಬೇರೆ ವಾರ್ಡ್‌ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ಅನಿವಾರ್ಯತೆ ಇದೆ. ಇದರಿಂದ ಅಗತ್ಯವಿರುವಾಗ ಸೂಕ್ತ ಚಿಕಿತ್ಸೆ ನೀಡುವುದೇ ಸವಾಲಾಗಿದೆ. ಬೆಂಗಳೂರಿನಲ್ಲಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹೊರತುಪಡಿಸಿ ರಾಜ್ಯದ ಇತರೆಡೆ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವ ಸರ್ಕಾರ ದೊಡ್ಡ ಮಟ್ಟದ ಆಸ್ಪತ್ರೆ ಇಲ್ಲ. ಹುಬ್ಬಳ್ಳಿಯು ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭವಾದರೆ ಅಕ್ಕಪಕ್ಕದ ಏಳೆಂಟು ಜಿಲ್ಲೆಯ ರೋಗಿಗಳಿಗೆ ಅನುಕೂಲವಾಗಲಿದೆ. ದೂರದ ಬೆಂಗಳೂರಿಗೆ ರೋಗಿಗಳು ಹೋಗುವದು ತಪ್ಪಲಿದೆ. ಇದರ ಜೊತೆಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹೊರೆಯನ್ನು ತಪ್ಪಿಸಬಹುದು" ಎಂದು ಕಮ್ಮಾರ ತಿಳಿಸಿದ್ದಾರೆ .