ಮಂಗಳೂರು: ಸಿಎಂ ಬದಲಾವಣೆಗೆ ಸಮಯ ಹಿಡಿಯುತ್ತೆ, ಡಿಕೆಶಿ ಸಿಎಂ ಆಗುವ ರೇಸ್‌ನಲ್ಲಿದ್ದಾರೆ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿ, ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಷರ ಬದಲಾವಣೆ ಮೀಡಿಯಾದಲ್ಲಿ ಹೇಳಿದ್ರೆ ಆಗೋದಿಲ್ಲ. ಎಲ್ಲಿ, ಯಾವಾಗ, ಯಾರಿಂದ ಆಗಬೇಕೋ, ಆವಾಗಾಗುತ್ತದೆ ಎಂದು ಹೇಳಿದರು.
ಸದ್ಯಕ್ಕೆ ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿಕೆಶಿಯವರೇ, ಪಿಡಬ್ಲ್ಯುಡಿ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರೇ. ಹೈಕಮಾಂಡ್ ಎಲ್ಲಾ ಜವಾಬ್ದಾರಿಯನ್ನು ತೀರ್ಮಾನ ಮಾಡಿ ಕೊಟ್ಟಿದೆ. ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದಷ್ಟೇ ನಮ್ಮ ಕೆಲಸ ಎಂದರು.
ಹಣವಿಲ್ಲದ ರಾಜ್ಯ ಸರಕಾರ ಬಜೆಟ್ ಹೇಗೆ ಮಂಡನೆ ಮಾಡುತ್ತದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಕೆಲಸವಿಲ್ಲ. ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ ಎಂದರು.
ಕೇಂದ್ರ ಸರಕಾರ ಪುರಸ್ಕೃತ ಕಾರ್ಯಕ್ರಮಗಳಿಗೆ ಎಷ್ಟು ಹಣ ಕೊಟ್ಟಿದ್ದಾರೆಂದು ಉತ್ತರಿಸಲಿ. ಅವರ ಹಣವನ್ನೂ ನಾವೇ ಕೊಡುತ್ತೇವೆ. ಜಲಜೀವನ್ ಮಿಷನ್‌ಗೆ ಕೇಂದ್ರ ಕೊಡಬೇಕಿದ್ದ 3,600 ಕೋಟಿಯಲ್ಲಿ ನಮಗೆ ಬಂದಿದ್ದು ಕೇವ 517ಕೋಟಿ ರೂ. ಕುಡಿಯುವ ನೀರಿನ ಯೋಜನೆಯನ್ನು ನಿಲ್ಲಿಸಬಾರದೆನ್ನುವ ಕಾರಣಕ್ಕೆ ನಮ್ಮ ಸರಕಾರ 2,900ಕೋಟಿ ಕೊಟ್ಟಿದೆ. ಹೆಸರು ಮಾತ್ರ ಅವರದ್ದು, ದುಡ್ಡು ನಮ್ಮದು. ತೆರಿಗೆ, ಜಿಎಸ್ಟಿ ನಾವೇ ಅತೀ ಹೆಚ್ಚು ಪಾವತಿಸುತ್ತಿದ್ದೇವೆ. ಆದರೆ ನಮಗೆ ಕೇಂದ್ರದಿಂದ ಬಿಡಿಗಾಸು ಸಿಗುತ್ತಿಲ್ಲ. ನಾವು 100ರೂ. ಕೊಟ್ಟರೆ ಕೇಂದ್ರ 13ರೂ. ಕೊಡುತ್ತಿದೆ. ಆದರೆ ಅದೇ 100ರೂ. ಕೊಡುವ ಯುಪಿ, ಬಿಹಾರಕ್ಕೆ 200-300ಕೊಡುತ್ತಿದೆ. ಇದು ನ್ಯಾಯವೇ ಎಂದರು.
ಡಿಸಿಎಂ ಎಲ್ಲಾ ಸಚಿವರ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಅವರು ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿಲ್ಲ. ಇದು ತಪ್ಪು ಮಾಹಿತಿ. ಎಐಸಿಸಿಯು, ಮ್ಯಾನಿಫೆಸ್ಟೊನಲ್ಲಿ ಹೇಳಿದ ಭರವಸೆಗಳನ್ನು ಎಷ್ಟು ಈಡೇರಿಸಿದ್ದೀರಾ?, ಹೊಸ ನೀತಿಗಳನ್ನು, ಎಷ್ಟು ಅನುದಾನವನ್ನು ತೆಗೆದುಕೊಂಡಿದ್ದೀರಾ? ಏನು ವಿನೂತನ ಕಾರ್ಯಕ್ರಮ ಹಾಕಿಕೊಂಡಿದ್ದೀರಾ?ಎಂದು ಎಲ್ಲಾ ಸಚಿವರಲ್ಲಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡಿದೆ. ಇದನ್ನು ನಾವು ಹೈಕಮಾಂಡ್ ಹಾಗೂ ಜನರಿಗೆ ನೀಡಬೇಕು. ಎರಡನ್ನೂ ನಾವು ಕೊಟ್ಟಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.