ನವದೆಹಲಿ: ಭಾರತ ಮತ್ತು ಜಪಾನ್ ನಡುವಿನ 'ಧರ್ಮ ಗಾರ್ಡಿಯನ್' ಆರನೇ ಆವೃತ್ತಿಯ ಜಂಟಿ ಸಮರಾಭ್ಯಾಸವು ಫೆಬ್ರವರಿ 25 ರಿಂದ ಮಾರ್ಚ್ 9 ರವರೆಗೆ ಜಪಾನ್ ನ ಮೌಂಟ್ ಫ್ಯೂಜಿಯಲ್ಲಿ ನಡೆಯಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ವಿಶ್ವಸಂಸ್ಥೆಯ ಸೂಚನೆಯ ಅಡಿಯಲ್ಲಿ ಜಂಟಿ ನಗರ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಉಭಯ ಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ರಕ್ಷಣಾ ಸಚಿವಾಲಯದ (ಸೇನೆ) ಐಎಚ್ಕ್ಯೂನ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾನಿರ್ದೇಶಕರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
"2024 ರ ಅಕ್ಟೋಬರ್ 14 ರಿಂದ 17 ರವರೆಗೆ ಸೇನಾ ಮುಖ್ಯಸ್ಥರ (ಸಿಒಎಎಸ್) ಜಪಾನ್ ಭೇಟಿಯ ಸಮಯದಲ್ಲಿ ಸಾಧಿಸಲಾದ ಪ್ರಗತಿಯನ್ನು ಆಧರಿಸಿ, ಧರ್ಮ ಗಾರ್ಡಿಯನ್ 2025 ಸಮರಾಭ್ಯಾಸವು ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ಅದು ಹೇಳಿದೆ.
ಇದಕ್ಕೂ ಮುನ್ನ ಫೆಬ್ರವರಿ 11 ರಂದು ಭಾರತ ಮತ್ತು ಈಜಿಪ್ಟ್ನ ವಿಶೇಷ ಪಡೆಗಳು ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ಗಳಲ್ಲಿ 'ಸೈಕ್ಲೋನ್ 3' ಸಮರಾಭ್ಯಾಸವನ್ನು ಪ್ರಾರಂಭಿಸಿವೆ. ಸಮರಾಭ್ಯಾಸ ಫೆಬ್ರವರಿ 23 ರಂದು ಕೊನೆಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸೈಕ್ಲೋನ್' ಸಮರಾಭ್ಯಾಸವು ಭಾರತ ಮತ್ತು ಈಜಿಪ್ಟ್ನಲ್ಲಿ ಪರ್ಯಾಯವಾಗಿ ನಡೆಸಲಾಗುವ ವಾರ್ಷಿಕ ಕಾರ್ಯಕ್ರಮವಾಗಿದೆ. ಈ ಹಿಂದೆ ಈ ಯೋಜನೆಯಡಿಯ ಸಮರಾಭ್ಯಾಸವು 2024 ರ ಜನವರಿಯಲ್ಲಿ ಈಜಿಪ್ಟ್ನಲ್ಲಿ ನಡೆದಿತ್ತು" ಎಂದು ಅಧಿಕಾರಿ ಹೇಳಿದರು.