ಶ್ರೀನಗರ : ಭಾರೀ ಚರ್ಚಿತ ವಕ್ಫ್ ತಿದ್ದುಪಡಿ ಮಸೂದೆಗೆ ಎನ್ಡಿಎ ಮಿತ್ರಪಕ್ಷಗಳೆಲ್ಲವೂ ಬೆಂಬಲ ನೀಡಿವೆ. ಮುಸ್ಲಿಮ್ ನಾಯಕರು ಸಾಮಾಜಿಕ ಒತ್ತಡದ ಹಿನ್ನೆಲೆ ಖಾಸಗಿಯಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಿಜೆಪಿ ಹೊರತಾಗಿ ಎನ್ಡಿಎ ಕೂಟದಲ್ಲಿ ವಕ್ಫ್ ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಎನ್ಡಿಎ ಕೂಟದ ಪ್ರಮುಖ ಮಿತ್ರರಾದ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದ ಜೆಡಿಯು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ)ಗಳು ತಮ್ಮ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದೆ.
ಈ ಬಗ್ಗೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ವಕ್ಫ್ ಮಸೂದೆ ತಿದ್ದುಪಡಿಯ ವಿರುದ್ಧ ವದಂತಿ ಮತ್ತು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಈ ವಿಚಾರದಲ್ಲಿ ಎನ್ಡಿಎ ಕೂಟ ಒಗ್ಗಟ್ಟಾಗಿದೆ ಎಂದು ಸ್ಪಷ್ಟಪಡಿಸಿದರು.
ನಿತೀಶ್ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಮಸೂದೆ ಕುರಿತು ತಮ್ಮ ಬೆಂಬಲದ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಮೂಲಕ ವಕ್ಫ್ ಸಂಸ್ಥೆಯನ್ನು ಪಾರದರ್ಶಕಗೊಳಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ವಿಶ್ವದಲ್ಲಿಯೇ ಅತಿದೊಡ್ಡ ವಕ್ಫ್ ಆಸ್ತಿ ಭಾರತದಲ್ಲಿದೆ. ಆದರೆ, ಅದು ಬಡ ಮುಸ್ಲಿಮರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರಯೋಜನ ನೀಡುತ್ತಿಲ್ಲ" ಎಂದು ಆರೋಪಿಸಿದರು.