ಮಹಾರಾಷ್ಟ್ರ: ಕೇಂದ್ರ ಸರ್ಕಾರ ನಿಷೇಧಿಸಿರುವ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವುಗಳನ್ನು ಏಕೆ ಸೇರಿಸಲಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಬಹುದು ಅಥವಾ ಅವು ಜೈವಿಕ ವಿಘಟನೀಯ ವಸ್ತುಗಳೆಂದು ಕೇಂದ್ರ ಭಾವಿಸಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ವಿಭಾಗೀಯ ಪೀಠ ಕೇಳಿದೆ.
ಪ್ಲಾಸ್ಟಿಕ್ ಹೂವುಗಳ ಬಳಕೆಯನ್ನು ನಿಷೇಧಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಗ್ರೋವರ್ಸ್ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ (ಜಿಎಫ್‌ಸಿಐ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
"ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಬಹುದು ಅಥವಾ ಅವು ಜೈವಿಕ ವಿಘಟನೀಯ ಎಂಬುದು ಕೇಂದ್ರ ಸರ್ಕಾರಕ್ಕೆ ಖಚಿತವಾಗಿದೆಯೇ? ಈ ಹೂಗಳು ತುಂಬಾ ಮೃದುವಾಗಿರುತ್ತವೆ. ಅವುಗಳನ್ನು ಮರುಬಳಕೆ ಮಾಡಬಹುದೇ?" ಎಂದು ಪ್ರಶ್ನಿಸಿದ ನ್ಯಾಯಾಲಯ, ಈ ಹೂಗಳು ನಿಷೇಧಿತ ವಸ್ತುಗಳ ಪಟ್ಟಿಯಲ್ಲಿಲ್ಲ ಎಂಬ ಕೇಂದ್ರದ ಅಫಿಡವಿಟ್ ಅನ್ನು ಉಲ್ಲೇಖಿಸಿತು.
ಮರುಬಳಕೆ ಮಾಡಲಾಗದ ಅಥವಾ ಜೈವಿಕ ವಿಘಟನೀಯವಲ್ಲದ ಏಕಬಳಕೆಯ ಪ್ಲಾಸ್ಟಿಕ್ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ನ್ಯಾಯಪೀಠ ಉಲ್ಲೇಖಿಸಿತು.
"ಪ್ಲಾಸ್ಟಿಕ್ ಹೂವುಗಳನ್ನು ಈ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಲಾಗದು ಎಂದು ನಿಮಗೆ ಖಚಿತವಾಗಿದೆಯೇ?" ಎಂದು ನ್ಯಾಯಪೀಠ ಕೇಳಿತು.