ಬೆಂಗಳೂರು: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಸಂಬಂಧ ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿವರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆ ಸ್ಪಷ್ಟೀಕರಣದ ಕಡತವನ್ನು ನಾಳೆಯೊಳಗೆ ಸಿಎಂ ಕಚೇರಿ ಮೂಲಕ ರಾಜಭವನಕ್ಕೆ ಮರುಸಲ್ಲಿಸಲು ಮುಂದಾಗಿದ್ದಾರೆ.
ರಾಜ್ಯಪಾಲರು ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ - 2025 ಕರಡನ್ನು ಕಳೆದ ವಾರ ರಾಜ್ಯಪಾಲರ ಅಂಕಿತಕ್ಕಾಗಿ ರಾಜ್ಯ ಸರ್ಕಾರ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರಡು ಸುಗ್ರೀವಾಜ್ಞೆ ಸಂಬಂಧ ಹಲವು ಸ್ಪಷ್ಟೀಕರಣ ಕೋರಿ ವಾಪಸ್ ಕಳುಹಿಸಿದ್ದರು. ಇದೀಗ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ರಾಜ್ಯಪಾಲರು ಕೇಳಿದ ಪ್ರತಿ ಅಂಶಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ. ಬೇರೆ ಯಾವುದೇ ಅಕ್ರಮ ಸಾಲ ಮತ್ತು ಬಡ್ಡಿ ವಸೂಲಾತಿ ಅರ್ಜಿಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ವಸೂಲಾತಿಗೆ ಅವಕಾಶ ನೀಡಿದರೆ ಸಂವಿಧಾನದ ಬಹುದೊಡ್ಡ ರಕ್ಷಣೆಯು ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಅಕ್ರಮವಾಗಿ ಕಾನೂನುಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿ. ಜೊತೆಗೆ ಸಮಾಜಕ್ಕೆ ಕಂಟಕ ತರುವಂತಹ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ ಎಂದು ತಿಳಿಸಿದ್ದಾರೆ.