image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್ ಜೆಪಿಸಿ ಸದಸ್ಯರ ಎಲ್ಲ ದೂರು ಮತ್ತು ಅಭಿಪ್ರಾಯಗಳನ್ನು ವರದಿಯಲ್ಲಿ ಸೇರಿಸಿರುವುದಾಗಿ ಜಗದಂಬಿಕಾ ಪಾಲ್ ಹೇಳಿಕೆ

ವಕ್ಫ್ ಜೆಪಿಸಿ ಸದಸ್ಯರ ಎಲ್ಲ ದೂರು ಮತ್ತು ಅಭಿಪ್ರಾಯಗಳನ್ನು ವರದಿಯಲ್ಲಿ ಸೇರಿಸಿರುವುದಾಗಿ ಜಗದಂಬಿಕಾ ಪಾಲ್ ಹೇಳಿಕೆ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ, 2024ರ ಕುರಿತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ವರದಿಯಲ್ಲಿ ಪ್ರತಿಪಕ್ಷಗಳ ಸಂಸದರು ಸಲ್ಲಿಸಿದ ಎಲ್ಲಾ ದೂರು ಹಾಗೂ ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಹೇಳಿದ್ದಾರೆ. ತಮ್ಮ ದೂರುಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಅಸಾದುದ್ದೀನ್ ಒವೈಸಿ, ಸಂಜಯ್ ಸಿಂಗ್ ಹಾಗೂ ಇನ್ನೂ ಕೆಲ ನಾಯಕರ ಆರೋಪಗಳನ್ನು ಅವರು ತಳ್ಳಿ ಹಾಕಿದರು.

ಪ್ರಸ್ತುತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಪಾಲ್, "ಜೆಪಿಸಿ ಸಭೆಗಳು ಮತ್ತು ಮಂಡಳಿಯ ಬಗ್ಗೆ ಪ್ರತಿಪಕ್ಷಗಳ ಹೇಳಿಕೆಗಳು ಸಂಪೂರ್ಣವಾಗಿ ನಿರಾಧಾರವಾಗಿವೆ. ಅವರು ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರವು ತಮ್ಮ ಮಾತನ್ನು ಕೇಳುತ್ತಿಲ್ಲ ಎಂಬ ಒವೈಸಿ ಮತ್ತು ಸಂಜಯ್ ಸಿಂಗ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ, ಅವರು ಲಿಖಿತವಾಗಿ ಸಲ್ಲಿಸಿದ ಎಲ್ಲಾ ದೂರುಗಳು ಮತ್ತು ತಿದ್ದುಪಡಿಗಳನ್ನು ವರದಿಯಲ್ಲಿ ಸೇರಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ." ಎಂದರು.

ಜೆಪಿಸಿಯ ಮುಂದಿನ ಸಭೆಯನ್ನು ಲೋಕಸಭಾ ಸ್ಪೀಕರ್ ನಿಗದಿಪಡಿಸಲಿದ್ದಾರೆ ಎಂದು ಪಾಲ್ ತಿಳಿಸಿದ್ದಾರೆ. "ಮುಂದಿನ ಸಭೆ ಯಾವಾಗ ನಡೆಯಲಿದೆ ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ ಮತ್ತು ಈ ಬಗ್ಗೆ ಈಗಾಗಲೇ ಅಧ್ಯಕ್ಷರಿಗೆ ತಿಳಿಸಲಾಗಿದೆ. ವಕ್ಫ್ (ತಿದ್ದುಪಡಿ) ಮಸೂದೆ, 2024 ರ ವರದಿಯನ್ನು ಸ್ಪೀಕರ್ ಕಾರ್ಯಸೂಚಿಯಲ್ಲಿ ಸೇರಿಸಿದ ನಂತರ ಮಂಡಿಸಲಾಗುವುದು" ಎಂದು ಅವರು ಹೇಳಿದರು.

"ಈ ತಿದ್ದುಪಡಿಯನ್ನು ಸುಧಾರಣೆಗಾಗಿ ಮಾಡಲಾಗುತ್ತಿದೆ. ವರದಿಯನ್ನು ಮಂಡಿಸಿದ ನಂತರ, ಸರ್ಕಾರವು ಉತ್ತಮ ನಿರ್ಧಾರವನ್ನೇ ಮಾಡಿದೆ ಎಂಬುದು ಜನರಿಗೆ ಗೊತ್ತಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ ನಂತರ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮೂಡಿದ ಹಾಗೆಯೇ ವಕ್ಫ್ ಕಾನೂನು ಅಲ್ಪಸಂಖ್ಯಾತರಿಗೆ ಪ್ರಯೋಜನವನ್ನು ನೀಡಲಿದೆ" ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ