ಮಂಗಳೂರು : ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಏನಾದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಗೂಂಡಾಗಿರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರೋದು ಸರಿಯಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದ, ಈ ರೀತಿಯ ಘಟನೆಗಳು ನಡೆದಾಗ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರ ಮೇಲೆ ಪರಿಣಾಮ ಬೀಳುತ್ತದೆ. ಬಂಡವಾಳ ಹೂಡುವವರು ಇಲ್ಲಿ ಸುರಕ್ಷತೆ ಇದೆಯಾ ಎಂದು ಕೇಳುತ್ತಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದ ಬಂಡವಾಳ ಹೂಡಿಕೆದಾರರು ಕೇಳಿದ್ದ ಒಂದೇ ಪ್ರಶ್ನೆ ಇಲ್ಲಿ ಸುರಕ್ಷತೆ ಇದ್ಯಾ ? ಎಂದು. ರಾಮ್ ಸೇನೆಯಾಗಲಿ, ಶ್ರೀರಾಮ ಸೇನೆ ಇರಲಿ ಈ ರೀತಿ ಮಾಡೋದು ಖಂಡಿತ ಸರಿಯಲ್ಲ. ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಆಗುತ್ತೆ. ಇಂತಹವರ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅವಶ್ಯಕತೆ ಇದೆ. ಕೆಲವರು ಈ ಘಟನೆಯನ್ನು ಇನ್ನೂ ಖಂಡಿಸಿಲ್ಲ ಎಂದರು.
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣವನ್ನು ಅತೀ ಶೀಘ್ರದಲ್ಲೇ ಪೊಲೀಸರು ಭೇದಿಸಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು, ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವುದು ಸರ್ಕಾರದ ಕರ್ತವ್ಯ. ಈ ಪ್ರಕರಣವನ್ನು ಕೇವಲ ನಾಲ್ಕು ದಿನದಲ್ಲಿ ಭೇದಿಸಿ ಎಲ್ಲಾ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಸುರಕ್ಷತೆಯ ಬಗ್ಗೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಸುರಕ್ಷತೆಯ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ? ಹಿಂದಿರುವವರು ಯಾರು ?ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದು ತಿಳಿಸಿದರು.