ಶ್ರೀನಗರ: ಕಾಶ್ಮೀರಕ್ಕೆ ಸಂಚರಿಸಲಿರುವ ಬಹುನಿರೀಕ್ಷಿತ ಮೊದಲ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿದೆ.
ಪ್ರಧಾನಿ ಕಚೇರಿಯಿಂದ ರೈಲ್ವೆ ಇಲಾಖೆಗೆ ದೃಢೀಕರಣದ ಅಗತ್ಯ ಇರುವುದರಿಂದ ಉದ್ಘಾಟನೆಗೆ ಅಂತಿಮ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದರು. ಪ್ರಧಾನಿ ಮೋದಿ ಕತ್ರಾದಿಂದ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಉದ್ಘಾಟನಾ ದಿನದಂದು ಪ್ರಧಾನಿ ಜಮ್ಮು ವಿಮಾನ ನಿಲ್ದಾಣದಲ್ಲಿ ಇಳಿದು, ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯಾದ ಚಿನಾಬ್ ಸೇತುವೆಗೆ ಹೆಲಿಕಾಫ್ಟರ್ ಮೂಲಕ ತೆರಳಲಿದ್ದಾರೆ. ನಂತರ ಅಲ್ಲಿಂದ ಕತ್ರಾ ರೈಲು ನಿಲ್ದಾಣಕ್ಕೆ ವಿಮಾನದ ಮೂಲಕ ತೆರಳಲಿದ್ದಾರೆ. ಅಲ್ಲಿ ಕಾಶ್ಮೀರಕ್ಕೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಪ್ರಧಾನಿ ಮೋದಿ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಕತ್ರಾದ ಕ್ರೀಡಾಂಗಣ ಹಾಗೂ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕತ್ರಾ ಮತ್ತು ಶ್ರೀನಗರ ನಡುವಿನ ರೈಲು ಸೇವೆಯ ಔಪಚಾರಿಕ ಉದ್ಘಾಟನೆ ನಂತರ, ಜನವರಿ 24 ಮತ್ತು 25 ರಂದು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ.