ಬೆಳಗಾವಿ: ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನದ ಉದ್ಘಾಟನೆಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.
ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿ ಮತ್ತಿತರ ನಾಯಕರು ಸ್ವಾಗತಿಸಿದರು.
ಸಮಾವೇಶಕ್ಕೆ ರಾಹುಲ್ ಗಾಂಧಿ ಬರಲ್ಲ : ರಾಹುಲ್ ಗಾಂಧಿಗೆ ಹುಷಾರಿಲ್ಲದ ಕಾರಣ ಅವರು ಸಮಾವೇಶಕ್ಕೆ ಬರುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿ ಮತ್ತಿತರ ನಾಯಕರು ಬರುತ್ತಿದ್ದಾರೆ. ಹಾಗಾಗಿ, ಸಮಾವೇಶದಿಂದ ರಾಹುಲ್ ಗಾಂಧಿ ದೂರ ಎಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.
ಗಾಂಧೀಜಿ ಅವರು ಸೌಹಾರ್ದತೆ ಇರಬೇಕು. ಸಮಾನತೆ ಬರಬೇಕು. ಅಸ್ಪೃಶ್ಯತೆ ನಿವಾರಣೆ ಆಗಬೇಕು. ಮಹಿಳೆಯರಿಗೆ ಸ್ವಾತಂತ್ರ್ಯ ಸಿಗಬೇಕು ಮತ್ತು ಅವರ ರಕ್ಷಣೆ ಆಗಬೇಕು ಎಂದು ಪ್ರತಿಪಾದಿಸಿದ್ದರು. ಬಸವಣ್ಣ, ಗಾಂಧೀಜಿ, ಕನಕದಾಸರು ಹೇಳಿದ ವಿಚಾರಗಳನ್ನೇ ಸಂವಿಧಾನದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನ, ಗಾಂಧೀಜಿ, ಅಂಬೇಡ್ಕರ್ ಅವರನ್ನು ವಿರೋಧಿಸುವ ಕೆಲಸ ಆಗುತ್ತಿದೆ. ಇದನ್ನು ತಡೆಗಟ್ಟುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಾಗಿದೆ. ನಾವು ಸಂವಿಧಾನದ ಪರವಾಗಿ ಇದ್ದರೆ, ಬಿಜೆಪಿಗರು ಮನುವಾದ ಪರವಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.