ಮಹಾಕುಂಭ ನಗರ : ಮಕರ ಸಂಕ್ರಾಂತಿಯ ಪುಣ್ಯದಿನವಾದ ಇಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 1.38 ಕೋಟಿ ಭಕ್ತರು, ಸಾಧು-ಸಂತರು ಪುಣ್ಯಸ್ನಾನ ಮಾಡಿದರು. ಶ್ರೀ ಪಂಚಾಯತಿ ಅಖಾರ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾರದ ಸದಸ್ಯರು ಮೊದಲು ಸ್ನಾನ ಮಾಡಿದರು. ಮಕರ ಸಂಕ್ರಾಂತಿಯ ಇಂದಿನ ಶುಭ ಸಂದರ್ಭದಲ್ಲಿ ಮಹಾಕುಂಭದ ಮೊದಲ ಅಮೃತ ಸ್ನಾನದ ನಿರಂಜನಿ ಅಖಾರದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.
ಮೊದಲ 'ಅಮೃತ ಸ್ನಾನ'ವು ಹಲವು ರೀತಿಯಲ್ಲಿ ವಿಶೇಷವಾಗಿದೆ. 'ಪುಷ್ಯ ಪೂರ್ಣಿಮಾ' ಪ್ರಯುಕ್ತ ಸಂಗಮ ಪ್ರದೇಶದಲ್ಲಿ ಸೋಮವಾರ ಮೊದಲ ಪ್ರಮುಖ ಸ್ನಾನದ ನಂತರ ಈ ಅಮೃತ ಸ್ನಾನ ನಡೆದಿದೆ. ಮಹಾಕುಂಭದಲ್ಲಿ ವಿವಿಧ ಪಂಗಡಗಳ ಹದಿಮೂರು ಅಖಾರಗಳು ಭಾಗವಹಿಸುತ್ತಿವೆ.
ಮೈ ಕೊರೆಯುವ ಚಳಿಯಲ್ಲೂ ಸ್ನಾನಕ್ಕೆ ತೆರಳುವ ವೇಳೆ ಭಕ್ತರು 'ಹರ ಹರ ಮಹಾದೇವ್', 'ಜೈ ಶ್ರೀ ರಾಮ್' ಮತ್ತು 'ಜೈ ಗಂಗಾ ಮೈಯ್ಯ' ಎಂಬೆಲ್ಲಾ ಘೋಷಣೆಗಳನ್ನು ಮೊಳಗಿಸಿದರು.
ಮಕರ ಸಂಕ್ರಾಂತಿ ಮತ್ತು ಬಸಂತ್ ಪಂಚಮಿಯಂದು ಸನಾತನ ಧರ್ಮದ 13 ಅಖಾರಗಳ 'ಅಮೃತ ಸ್ನಾನ'ದ ದಿನಾಂಕ ಹಾಗೂ ಸಮಯದ ಕುರಿತು ಮಹಾ ಕುಂಭಮೇಳದ ಆಡಳಿತ ಆದೇಶ ಹೊರಡಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ತಿಳಿಸಿದೆ.