ಬೆಂಗಳೂರು: ಪಂಚ ಗ್ಯಾರಂಟಿ ಹಾಗೂ ಗರಿಷ್ಠ ಬದ್ಧ ವೆಚ್ಚದ ಹೊರೆಯ ಮಧ್ಯೆ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ಕಸರತ್ತು ನಡೆಸುತ್ತಿದೆ. ಆದರೆ ಆರ್ಥಿಕ ವರ್ಷದ 9 ತಿಂಗಳು ಕಳೆದರೂ ಸ್ವಂತ ರಾಜಸ್ವ ಬಜೆಟ್ ಗುರಿ ತಲುಪಲು ಸಾಧ್ಯವಾಗಿಲ್ಲ. ಈವರೆಗಿನ ರಾಜ್ಯಸ್ವ ತೆರಿಗೆ ಸಂಗ್ರಹದ ಸ್ಥಿತಿಗತಿಯ ಬಗ್ಗೆ ಆರ್ಥಿಕ ಇಲಾಖೆ ಅಂಕಿ-ಅಂಶಗಳ ವರದಿ ನೀಡಿದೆ.
ಪ್ರಸಕ್ತ ಬಜೆಟ್ ವರ್ಷದ ಅಂತಿಮ ತ್ರೈಮಾಸಿಕದಲ್ಲಿರುವ ಕಾಂಗ್ರೆಸ್ ಸರ್ಕಾರ ಇದೀಗ ಮುಂದಿನ ಆರ್ಥಿಕ ವರ್ಷದ ಬಜೆಟ್ ಸಿದ್ಧತೆ ಆರಂಭಿಸಿದೆ. ಬಜೆಟ್ ವರ್ಷದ 9 ತಿಂಗಳು ಕಳೆದಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಬಜೆಟ್ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ಬಜೆಟ್ಗೆ ತಯಾರಿ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆದಾಯ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಎಂ ಕಳೆದ ನವೆಂಬರ್ನಲ್ಲಿ ಸಭೆ ನಡೆಸಿ ಬಜೆಟ್ ಗುರಿಯಂತೆ ತೆರಿಗೆ ಸಂಗ್ರಹಿಸುಂತೆ ಸೂಚಿಸಿದ್ದರು.
ಆರ್ಥಿಕ ಇಲಾಖೆ ಮಾಹಿತಿ ಪ್ರಕಾರ, ವಾರ್ಷಿಕ ತೆರಿಗೆ ಸಂಗ್ರಹದ ಬಜೆಟ್ ಗುರಿ ಇರುವುದು 1,87,525 ಕೋಟಿ ರೂ. ಆಗಿದೆ. ಆ ಪೈಕಿ ಒಟ್ಟು ನಾಲ್ಕು ಪ್ರಮುಖ ತೆರಿಗೆಗಳ ಮೂಲಕ ಡಿಸೆಂಬರ್ವರೆಗೆ 1,25,101 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಅಂದರೆ 66%ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಮಾಸಿಕ ಸರಾಸರಿ 13,900 ಕೋಟಿ ರೂ.ಗಳಂತೆ 9 ತಿಂಗಳಲ್ಲಿ ಒಟ್ಟು ತೆರಿಗೆ ಸಂಗ್ರಹ ಮಾಡಲಾಗಿದೆ. ಅಂದರೆ ಮಾಸಿಕ ಸರಾಸರಿ ಶೇ11.11ರಂತೆ ತೆರಿಗೆ ಸಂಗ್ರಹ ಮಾಡಲಾಗಿದೆ. ಬಜೆಟ್ ಗುರಿಯಂತೆ 9 ತಿಂಗಳಲ್ಲಿ ಸುಮಾರು 1,40,628 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಾಗಿತ್ತು. ಡಿಸೆಂಬರ್ವರೆಗೆ ಬಜೆಟ್ ಗುರಿಗಿಂತ ಸುಮಾರು 15,527 ಕೋಟಿ ರೂ. ತೆರಿಗೆ ಸಂಗ್ರಹ ಕುಂಠಿತವಾಗಿದೆ.