ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ ನಡೆಸುವ ಮೂಲಕ ವೆನ್ಲಾಕ್ ಸರಕಾರಿ ಆಸ್ಪತ್ರೆಯ 176ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪಥಮ ಬಾರಿಗೆ ಅಂಗಾಂಗ ದಾನ ನಡೆದಿದೆ.
ಶಿವಮೊಗ್ಗ ಮೂಲದ ರೇಖಾ ಎಂಬ 41ವರ್ಷದ ಮಹಿಳೆಯು ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಆ ಬಳಿಕ ಅವರು ಮೆದುಳಿಗೆ ಸಂಬಂಧಿಸಿದ (Cerebro vascular accident) ಸಮಸ್ಯೆಯಿಂದ ಬಳಲುತ್ತಿದ್ದು, ಜನವರಿ 6ರಂದು ಅವರನ್ನು ಶಿವಮೊಗ್ಗದಿಂದ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.
ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಮಹಿಳೆಯ ಅಂಗಾಂಗ ದಾನ ಮಾಡಿಸಲು ಕುಟುಂಬಸ್ಥರಿಗೆ ಅಂಗಾಂಗ ದಾನದ ಅರಿವು ಮೂಡಿಸಿದ್ದರು. ಅಂಗಾಂಗ ದಾನಕ್ಕೆ ಕುಟುಂಬಸ್ಥರ ಸಮ್ಮತಿ ಸಿಕ್ಕ ತಕ್ಷಣ ವೆನ್ಲಾಕ್ ಆಸ್ಪತ್ರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆಗೆ ಸಿದ್ಧತೆ ನಡೆಸಿತ್ತು. ಅದರಂತೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿನ ರೋಗಿಗೆ ಯಕೃತ್ ರವಾನೆ ಮಾಡಿದರೆ, ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕಣ್ಣಿನ ಕಾರ್ನಿಯಾವನ್ನು ದಾನ ಮಾಡಲಾಯಿತು.
ವೆನ್ಲಾಕ್ ಆಸ್ಪತ್ರೆಯಿಂದ ಲಿವರ್ ಅನ್ನು ಹೊತ್ತ ಆ್ಯಂಬುಲೆನ್ಸ್ ಪುತ್ತೂರು, ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ರವಾನೆಯಾಯಿತು. ಅಂಗಾಂಗ ರವಾನೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.