ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶೇ 50ರಷ್ಟು ಪ್ರದೇಶಕ್ಕೆ ಸಂಸ್ಕರಿಸದ ನೀರು ಪೂರೈಕೆಯಾಗುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ಈ ಸಂಬಂಧ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ತಜ್ಞರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಿ, ಅಧ್ಯಯನ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೊಳಚೆನೀರು ನಿರ್ವಹಣಾ ಘಟಕ (ಎಸ್‌ಪಿ) ನಿರ್ವಹಣೆಗೆ ವಾರ್ಷಿಕವಾಗಿ ₹1.5 ಕೋಟಿ ವೆಚ್ಚ ಮಾಡುತ್ತಿದ್ದರೂ, ಎಸ್‌ಟಿಪಿಗಳು ಕಾರ್ಯ ನಿರ್ವಹಿಸದ ಕಾರಣ, ಕೊಳಚೆ ನೀರು ರಾಜಕಾಲುವೆ ಸೇರುತ್ತಿದೆ. ನದಿಗಳು ಮಲಿನಗೊಂಡಿವೆ. ಕಲುಷಿತ ನೀರು ಪೂರೈಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಇದ್ದರೂ, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದರು.
ಸಂಸ್ಕರಿಸದ ನೀರು ಕುಡಿದು ಜನರು ಅನಾರೋಗ್ಯಕ್ಕೆ ಒಳಗಾದರೆ ಅದಕ್ಕೆ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹೊಣೆಯಾಗುತ್ತದೆ. ನಗರಾಭಿವೃದ್ಧಿ ಸಚಿವರು ನಗರಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ನೀರಿನ ಗುಣಮಟ್ಟ ತಪಾಸಣೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗುವುದು. ಐದು ವರ್ಷಗಳಲ್ಲಿ ರಸ್ತೆ ಅಗೆದಿದ್ದು ಬಿಟ್ಟರೆ ಬಿಜೆಪಿ ಆಡಳಿತದಲ್ಲಿ ಯಾವ ಕೆಲಸವೂ ಆಗಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಕಲುಷಿತಗೊಂಡಿರುವ ನದಿಗಳಲ್ಲಿ ನೇತ್ರಾವತಿಯೂ ಒಂದಾಗಿದೆ. ಇದೇ ನದಿಯ ನೀರನ್ನು ನಾವು ಕುಡಿಯುತ್ತಿದ್ದೇವೆ. ಎಸ್‌ಟಿಪಿಗಳ ನೀರು ರಾಜಕಾಲುವೆ ಮೂಲಕ ನದಿ ಸೇರುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿದರೂ, ಯಾವ ಬದಲಾವಣೆಯೂ ಆಗಿಲ್ಲ ಎಂದು ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅನಿಲ್‌ಕುಮಾರ್, ಸದಸ್ಯರಾದ ಶಶಿಧರ್ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೊ, ಸತೀಶ್ ಪೆಂಗಲ್, ಪ್ರಮುಖರಾದ ಹರಿನಾಥ್, ಸಂಶುದ್ದೀನ್, ಝೀನತ್, ಕೇಶವ, ಭಾಸ್ಕರ ಕೆ., ಚೇತನ್, ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.