image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಮಾಜ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವಿಟ್ಟು 2 ಕೋ.ರೂ. ವಂಚನೆ ಪ್ರಕರಣ : ಸಿಬ್ಬಂದಿಗಳು ಬಲಿ ಕಾ ಬಕ್ರಾ...?

ಸಮಾಜ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವಿಟ್ಟು 2 ಕೋ.ರೂ. ವಂಚನೆ ಪ್ರಕರಣ : ಸಿಬ್ಬಂದಿಗಳು ಬಲಿ ಕಾ ಬಕ್ರಾ...?

ಮಂಗಳೂರು: ಅಮ್ಮೆಂಬಳ ಬಾಳಪ್ಪನವರ ದೂರದೃಷ್ಟಿಯಲ್ಲಿ ಅತೀ ಹಿಂದುಳಿದ ಸಮೂದಾಯಗಳಲ್ಲಿ ಒಂದಾದ ಕುಲಾಲ ಸಮುದಾಯಕ್ಕೆ ಸಹಕಾರಿ ಆಗಲಿ ಎಂದು ಕಟ್ಟಿ ಬೆಳೆಸಿದ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ ಪಡೀಲು ಶಾಖೆಯಲ್ಲಿ ನಕಲಿ ಚಿನ್ನವಿಟ್ಟು 2 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದ ವಂಚನೆ ಪ್ರಕರಣದಲ್ಲಿ ನಿಯಮಾನುಸಾರ ಬಾಕಿಯನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲಾಗಿದೆ ಎಂದು ಸಂಘದ ಆಡಳಿತ ಮಂಡಳಿಯ ಪರವಾಗಿ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ತಿಳಿಸಿದ್ದಾರೆ.

ವಿಶೇಷ ಎಂದರೆ ಯಾವುದೇ ಸಹಕಾರ ಸಂಘಗಳ ಸಾಧನೆಯನ್ನು ತಿಳಿಸಲು ಮಾಡುವ ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಇರುವುದು ಸಹಜ. ಆದರೆ ಇಂದು  ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಾ ಸಹಕಾರಿ ಸಂಘದ ಅಧಿಕಾರಿಗಳು ಸಹಕಾರಿ ಸಂಘದ ಕಳೆದ ಐದು ವರ್ಷಗಳ ಪ್ರಗತಿಯ ವಿವರ ನೀಡಲು ಬಂದಿದ್ದರು. ಬ್ಯಾಂಕ್ ನ ಅಧ್ಯಕ್ಷರಾಗಲಿ, ಆಡಳಿತ ಮಂಡಳಿಯವರಾಗಲಿ ಭಾಗವಹಿಸದಿರುವ ಬಗ್ಗೆ ಸುದ್ದಿಗಾರರು ಬ್ಯಾಂಕ್ ಸಿಬ್ಬಂದಿಗಳನ್ನು ತರಾಟೆಗೈದಾಗ, ಮುಂದೆ ಅವರು ಬರುತ್ತಾರೆ ಎಂದು ಅಧಿಕಾರಿಗಳು ನಿಸ್ಸಾಹಾಯಕರಾಗಿ ಹೇಳುತ್ತಿರುವುದು ನೋಡಿದಾಗ ಹೇಗಾದರೂ ಮಾಡಿ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಎನ್ನುವಂತಿತ್ತಾದರೂ, ನಮ್ಮ ಕೈಯಲ್ಲಿ ಏನೂ ಇಲ್ಲವಲ್ಲ ಎನ್ನುವ ನಿಸ್ಸಾಹಾಯಕ ಸ್ಥಿತಿ. 

ಪಡೀಲ್ ಶಾಖೆಯಲ್ಲಿ ಪುತ್ತೂರಿನ ಅಬೂಬಕರ್ ಸಿದ್ದೀಕ್ ಎಂಬಾತ ಚಿನ್ನ ಲೇಪಿತ ಆಭರಣಗಳನ್ನು ಅಡವಿರಿಸಿ 2.11 ಕೋಟಿ ರೂ. ಸಾಲ ಪಡೆದಿದ್ದರು. ಹರಾಜು ಪ್ರಕ್ರಿಯೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ಸರಫರಿಂದ ವಸೂಲು ಮಾಡಿಕೊಂಡು ಬ್ಯಾಂಕ್ ಗೆ ಬರಬೇಕಾಗಿದ್ದ ಹಣವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ನಕಲಿ ಚಿನ್ನಾಭರಣ ಇರಿಸಿದ್ದ ಆರೋಪಿಯ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರಾರೂ,

ಬ್ಯಾಂಕ್ ನ ಬಾಕಿ ಹಣಕ್ಕಾಗಿ ಸಿಬ್ಬಂದಿಯ ವೇತನದ ಎರಿಯರ್ಸ್ ನ್ನೂ ಬಳಸಲಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಬ್ಯಾಂಕ್ ಗಾಗಿ ಸಿಬ್ಬಂದಿ ತಮ್ಮ ಐದು ತಿಂಗಳ ಎರಿಯರ್ಸ್ ಹಣವನ್ನು ತ್ಯಾಗ ಮಾಡಿದ್ದಾರೆ ಎಂದರು. ಇಲ್ಲಿ ಮತ್ತೆ ಸಿಬ್ಬಂದಿಗಳು ಬಲಿ ಕಾ ಬಕ್ರಾ ಆಗಿರುವುದಂತೂ ನಿಜ. ಇದಕ್ಕೂ ಮುಂಚಿನ ಹಲವಾರು ಕೇಸುಗಳು ಕೋರ್ಟಿನಲ್ಲಿ ಇರುವುದಾಗಿ ಸಿಬ್ಬಂದಿಗಳು ಒಪ್ಪಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರನ್ನು ನೋಡಿದಾಗ‌ ಕೊನೆಗೆ ಬ್ಯಾಂಕ್ ಉಳಿಯಬೇಕು ಎನ್ನುವ ಕಳಕಳಿಯಷ್ಟೇ ಕಾಣುತ್ತಿತ್ತು.  

ಪುತ್ತೂರಿನಿಂದ ಒಬ್ಬ ಮನುಷ್ಯ ಮಂಗಳೂರಲ್ಲಿ  ಸಾಲ ತೆಗೆದುಕೊಳ್ಳುವುದು ತಪ್ಪಲ್ಲವಾದರೂ, ಪುತ್ತೂರಿನ ಶಾಖೆಯಲ್ಲಿ ನಕಲಿ ಚಿನ್ನ ಒತ್ತೆ ಇಡುವುದು ಸಾಧ್ಯವಿಲ್ಲ ಎನ್ನುವುದು ತಿಳಿದಿರಬೇಕು. ಅಲ್ಲಿಂದ ಬಂಟ್ವಾಳದ ಪ್ರಧಾನ ಕಚೇರಿಗಾದರೂ ಹೋಗಬಹುದಿತ್ತು. ಅದು‌ ನಡೆದಿಲ್ಲ. ಎಂದರೆ ಎಲ್ಲವೂ ಯೋಜನೆ ಪ್ರಕಾರವೇ ನಡೆದಿದೆ ಎನ್ನುವುದು ಸಮಾಜ ಸೇವಾ‌ ಸಹಕಾರಿ ಸಂಘದಲ್ಲಿ ಖಾತೆ ಹೊಂದಿರುವವರ ಮಾತು.

ಇನ್ನು ಸಾಲ ವಸೂಲಾತಿ ಆಗಿದೆ ಎಂದು ಓಲೆ  ಕಳುಹಿಸಿರುವ ಆಡಳಿತ ಮಂಡಳಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಆರೋಪಿತನ ಮೇಲೆ ದೂರು ಕೊಡುವುದಕ್ಕೂ ಹಿಂದೆ ಮುಂದೆ ನೋಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  

ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬೇರೆ ಇದ್ದು, ಚುನಾವಣೆಯ ಸಲುವಾಗಿ ಅಧಿಕಾರಕ್ಕಾಗಿ ಸೆಣಸುತ್ತಿರುವ ಇನ್ನೊಂದು ಟೀಮು ಈಗಿನ ಆಡಳಿತ ಮಂಡಳಿಯ ಮೇಲೆ ಗೂಬೆ ಕೂರಿಸುತ್ತಿದೆ ಎನ್ನುವ  ಆರೋಪ ಆಡಳಿತ ಮಂಡಳಿಯದ್ದು. ಅಂತೂ ಇಂತೂ ಅಮ್ಮೆಂಬಳ ಬಾಳಪ್ಪ, ಹೂವಯ್ಯರಂತಹ ಹಿರಿಯರು ಯಾವ ಕಾರಣಕ್ಕಾಗಿ ಸಂಘವನ್ನು ಕಟ್ಟಿ ಬೆಳೆಸಿದ್ದಾರೋ ಅದು ಫಲಿಸದೇ, ಬರೀ ಹಗರಣಗಳಲ್ಲಿಯೇ ಸಮಾಜ ಸೇವಾ ಸಹಕಾರಿ ಸಂಘ ಹೆಸರುವಾಸಿ ಆಗುತ್ತಿರುವುದು ವಿಪರ್ಯಾಸವೇ ಸರಿ.

Category
ಕರಾವಳಿ ತರಂಗಿಣಿ