ಮಂಗಳೂರು: ಇಂದು ನೆರವು ಪಡೆದವರು ಈ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದು ಮುಂದೊಂದು ದಿನ ಸಮಾಜಕ್ಕೆ ತಮ್ಮಿಂದಾದ ನೆರವನ್ನು ನೀಡಬೇಕು ಎಂದು ಎಂ ಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯ ಹಸ್ತ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡಿ “ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ ಮಗ ಸೊಸೆ ಸಹಿತ ಅಕ್ಕ ತಂಗಿಯರು, ಅಣ್ಣ ಅತ್ತಿಗೆ ಸೇರಿ ಕುಟುಂಬ ಸದಸ್ಯರೆಲ್ಲಾ ಸಹಕಾರ ನೀಡುತ್ತಿದ್ದಾರೆ. ನನ್ನ ತಂಗಿ ಮಗನ ಜೊತೆ 50 ಜನರ ಯುವ ತಂಡ ಈ ಕಾರ್ಯಕ್ರಮಕ್ಕೆ ದುಡಿಯುತ್ತಿದೆ. ಮೊದಲ ವರ್ಷದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು ಅದು ಇಂದು 6 ಕೋಟಿ ರೂ. ಗಡಿಯನ್ನು ದಾಟಿದೆ. ಇಂದು ಇಂತಹ ಕಾರ್ಯಕ್ರಮ ಇಂದು ಸಹಾಯ ಪಡೆದ ಕೈಗಳಿಗೆ ಸ್ಫೂರ್ತಿಯಾಗಬೇಕು. ಮುಂದೊಂದು ದಿನ ಅವರು ಕೂಡಾ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು. ಕಷ್ಟ ಎಲ್ಲರಿಗೂ ಬರುತ್ತದೆ. ಆದರೆ ಧೃತಿಗೆಡದೆ ಅದನ್ನು ಎದುರಿಸುವ ಛಲ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿ ಗೌರವ ಪಡುವಂತೆ ಸಾಧನೆ ಮಾಡಿ ದೇಶದಲ್ಲಿ ಗುರುತಿಸುವಂತಾಗಬೇಕು“ ಎಂದರು.
ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷೆ ಹಾಗೂ ಸಹ- ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, “ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು, ಸಾಮಾಜಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಪ್ರಕಾಶ್ ಶೆಟ್ಟಿಯವರ ನೆರವು ಕಾರ್ಯಕ್ರಮ ಶ್ಲಾಘನೀಯವಾದುದು. ನಾವೇ ಹುಡುಕಿಕೊಂಡು ಹೋಗಿ ಅರ್ಹರಿಗೆ ನೆರವು ನೀಡುವ ಮಾದರಿ ಕಾರ್ಯಕ್ರಮ ಇದಾಗಿದೆ. ಇಲ್ಲಿ ಆರ್ಥಿಕ ಸಹಾಯ ಪಡೆದಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ“ ಎಂದರು.
ಪ್ರಾಸ್ತಾವಿಕ ಮಾತನ್ನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, “ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗದಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅದಮ್ಯ ಫೌಂಡೇಶನ್ ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಅವರು ಮಾಡುತ್ತ ಬಂದಿದ್ದಾರೆ. ಎಲ್ಲೂ ತಮ್ಮ ಸಹಾಯವನ್ನು ಹೊರಗಡೆ ತೋರಿಸದೆ ಎಲ್ಲರೊಳಗೆ ಒಂದಾಗಿ ಬದುಕುತ್ತಿರುವ ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ.
ಅದೇ ರೀತಿ ಪ್ರಕಾಶ್ ಶೆಟ್ಟಿಯವರ ಪ್ರತೀ ಕಾರ್ಯದ ಹಿಂದೆ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಅವರ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಇದೆ. ಅವರ ಪುತ್ರ ಗೌರವ್ ಅವರು ತಂದೆ ತಾಯಿಯ ಪ್ರೀತಿಯ ಪುತ್ರನಾಗಿ ಸರಳ ಸಜ್ಜನಿಕೆಯಿಂದ ಗುರುತಿಸಲ್ಪಡುತ್ತಿದ್ದಾರೆ. ಇಂತಹ ಪುಣ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಪ್ರಕಾಶ್ ಶೆಟ್ಟಿಯವರ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ“ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, “ಪ್ರಕಾಶ್ ಶೆಟ್ಟಿ ಅವರಂತಹ ಪುಣ್ಯಾತ್ಮನ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ. ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತಹಂತವಾಗಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ. ಅವರ ದಾನ ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ“ ಎಂದರು.
ಬಳಿಕ ವೇದಿಕೆಯಲ್ಲಿ ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ಸಾಂಕೇತಿಕವಾಗಿ “ನೆರವು” ಸಹಾಯಹಸ್ತವನ್ನು ವಿತರಿಸಲಾಯಿತು.ಅನುಷ್ಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.