ಮಂಗಳೂರು: ಕೊಂಕಣ ರೈಲ್ವೆಯ ಷೇರುಗಳನ್ನು ರಾಜ್ಯ ಸರ್ಕಾರ ಬಿಟ್ಟುಕೊಟ್ಟಲ್ಲಿ ಇಂಡಿಯನ್ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ಸಿದ್ಧ ಎಂಬುದಾಗಿ ಕೇಂದ್ರ ಸಚಿವರು ಸಂಸತ್‌ನಲ್ಲಿ ಉತ್ತರಸಿದ್ದಾರೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಸಂಸತ್ತಿನಲ್ಲಿ ತಾನು ಎತ್ತಿದ 19 ಪ್ರಶ್ನೆಗಳು ಬಗ್ಗೆ ಮಾಹಿತಿ ನೀಡಿದ ಅವರು ಕೊಂಕಣ ರೈಲ್ವೆ ವಿಲೀನದ ಪ್ರಶ್ನೆಗೆ ದೊರಕಿದ ಉತ್ತರದ ಬಗ್ಗೆ ಮಾತನಾಡಿ, ಆ ಷೇರಿನ ಪೂರಕ ಹಣವನ್ನು ಕೇಂದ್ರ ಸರ್ಕಾರ ನೀಡಿದಲ್ಲಿ ಷೇರು ಬಿಟ್ಟುಕೊಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈಗಾಗಲೇ ಕೊಂಕಣ ರೈಲ್ವೆ ಕೋಟ್ಯಂತರ ರೂ. ಸಾಲದಲ್ಲಿರುವುದರಿಂದ ರಾಜ್ಯ ಸರ್ಕಾರ ಅದರ ಷೇರುಗಳನ್ನು ಬಿಟ್ಟುಕೊಟ್ಟು ವಿಲೀನಕ್ಕೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರದ ಜನಾನುಕೂಲ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಪ್ರಧಾನಮಂತ್ರಿ ಆವಾಜ್ 2.2 ಯೋಜನೆಗೆ ಈಗಾಗಲೇ ಚಾಲನೆ ದೊರಕಿದೆ. ದೇಶದ 24ರಾಜ್ಯಗಳು ಈ ಯೋಜನೆ ಜಾರಿಗೆ ಸಹಿ ಹಾಕಿದ್ದರೂ ಕರ್ನಾಟಕ ಸರ್ಕಾರ ಇದುವರೆಗೆ ಸಹಿ ಹಾಕಿಲ್ಲ. ಈ ಕುರಿತು ಅಧಿವೇಶನದಲ್ಲಿ ಜಿಲ್ಲೆಯ ಶಾಸಕರುಗಳು ಎತ್ತಿದ ಪ್ರಶ್ನೆಗೆ ರಾಜ್ಯ ಸಚಿವ ಜಮೀರ್ ಅಹ್ಮದ್ ಅವರು ‘ಯೋಜನೆಯಡಿ ಕೇಂದ್ರ ನೀಡುವ 1.5 ಲಕ್ಷ ರು. ಹಣದಲ್ಲಿ ಮನೆ ಕಟ್ಟಲಾಗದು’ ಎಂಬ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ. ರಾಜ್ಯದ ಜನರ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕನಿಷ್ಠ ಕಾಳಜಿ ಇದ್ದರೆ ಪಿಎಂ ಆವಾಜ್ ಯೋಜನೆ ಜಾರಿಗೆ ಸಹಿ ಹಾಕಬೇಕು ಎಂದು ಆಗ್ರಹಿಸಿದರು.
ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ ನಿಟ್ಟಿನಲ್ಲಿ ಸಿಆರ್‌ಝಡ್ ಸಮಸ್ಯೆ ಬಗೆಹರಿಸಲು ರಾಜ್ಯ ಬಂದರು ಇಲಾಖೆ ಆಸಕ್ತಿ ತೋರಿಸುತ್ತಿಲ್ಲ. ಮಂಗಳೂರು-ಬೆಂಗಳೂರು ನಡುವಿನ ಬಿ.ಸಿ.ರೋಡ್- ಗುಂಡ್ಯ ಚತುಷ್ಪಥ ಹೆದ್ದಾರಿ ಕಾಮಗಾರಿ 2025ರ ಜೂನ್‌ನಲ್ಲಿ ಪೂರ್ಣಗೊಳಿಸುವುದಾಗಿ ಕೇಂದ್ರ ಸಚಿವರು ಸಂಸತ್ತಲ್ಲಿ ಉತ್ತರ ನೀಡಿದ್ದಾರೆ ಎಂದರು.