ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ರಾತ್ರಿ ಊಟದ ಜೊತೆಗೆ ಮೊಟ್ಟೆ ವಿತರಿಸಲಾಗಿದ್ದು, ಈ ಮೂಲಕ ಪ್ರಗತಿಪರ ಹೋರಾಟಕ್ಕೆ ಸರ್ಕಾರ ಮಣಿದಿದೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ಕೂಡ ಬಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದರು. ಶನಿವಾರ ಮನೆಯಿಂದ ಮಾಂಸಾಹಾರ ತಂದು ಸಮ್ಮೇಳನದ ಸ್ಥಳದಲ್ಲಿ ಊಟ ಮಾಡಿದ ಪ್ರಗತಿಪರರು ಭಾನುವಾರ ಸಮ್ಮೇಳನಕ್ಕೆ ಬಂದವರಿಗೆ ಬಾಡೂಟ ವಿತರಿಸಿದ್ದರು.
ಬಾಡೂಟ ನೀಡದಿದ್ದರೆ ಮೊಟ್ಟೆಯನ್ನಾದರೂ ವಿತರಿಸಬೇಕೆಂದು ಪಟ್ಟು ಹಿಡಿದಿದ್ದ ಪ್ರಗತಿಪರರು ಭಾನುವಾರ ಮಧ್ಯಾಹ್ನ ಮೊಟ್ಟೆ, ಚಿಕನ್ ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ವಿತರಿಸಿದ್ದರು. ಸಮ್ಮೇಳನದ ಸ್ಥಳದಲ್ಲಿ ಬಾಡೂಟ ವಿತರಿಸುವಾಗ ಪ್ರಗತಿಪರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿತ್ತು.