image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕನ ಕೈ, ಕಾಲು ಕಟ್ಟಿ ಬರ್ಬರ ಹತ್ಯೆ; ದೇವಸ್ಥಾನ ಲೂಟಿ

ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕನ ಕೈ, ಕಾಲು ಕಟ್ಟಿ ಬರ್ಬರ ಹತ್ಯೆ; ದೇವಸ್ಥಾನ ಲೂಟಿ

ಪಶ್ಚಿಮ ಬಂಗಾಳ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲಿನ ದಾಳಿ, ದೌರ್ಜನ್ಯಗಳು ಎಗ್ಗಿಲ್ಲದೆ ಮುಂದುವರೆದಿವೆ. ನಾತೋರ್ ಎಂಬಲ್ಲಿ ಸ್ಮಶಾನದಲ್ಲಿರುವ ಹಿಂದೂ ದೇಗುಲದ ಅರ್ಚಕರೊಬ್ಬರನ್ನು ಮತಾಂಧರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆಯನ್ನು ಇಸ್ಕಾನ್ ಕೋಲ್ಕತ್ತಾ ಶನಿವಾರ ಬಲವಾಗಿ ಖಂಡಿಸಿದ್ದು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಾನಂತರ ದೌರ್ಜನ್ಯಗಳು, ಕೊಲೆಗಳ ಸರಣಿ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಇಸ್ಕಾನ್ ಕೋಲ್ಕತಾದ ವಕ್ತಾರ ರಾಧಾರಮಣ್ ದಾಸ್ 'ಎಕ್ಸ್' ಪೋಸ್ಟ್‌ನಲ್ಲಿ, "ಬಾಂಗ್ಲಾದೇಶದ ನಾತೋರ್‌ನ ಕಾಶಿಂಪುರ್ ಸೆಂಟ್ರಲ್‌ ಸ್ಮಶಾನದಲ್ಲಿರುವ ದೇಗುಲದ ಮೇಲೆ ನಡೆದ ದಾಳಿಯ ಸುದ್ದಿ ಕೇಳಿ ಆಘಾತವಾಯಿತು. ಅಲ್ಲಿನ ಬೆಲೆಬಾಳುವ ವಸ್ತುಗಳನ್ನೂ ಲೂಟಿ ಮಾಡಿದ್ದಾರೆ. ದೇಗುಲದ ಅರ್ಚಕ ತರುಣ್ ಚಂದ್ರ ದಾಸ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಎರಡೂ ಕೈಗಳು ಮತ್ತು ಕಾಲುಗಳನ್ನು ಕಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ. ಹಿಂದೂಗಳ ಸ್ಮಶಾನ ಭೂಮಿಯೂ ಸುರಕ್ಷಿತವಾಗಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ವಿಡಿಯೋವನ್ನು ಸುದ್ದಿಸಂಸ್ಥೆ ಪಿಟಿಐ ಸ್ವತಂತ್ರವಾಗಿ ದೃಢೀಕರಿಸಿಲ್ಲ. ಆದರೆ, ವೈರಲ್ ಆಗಿರುವ ದೃಶ್ಯದಲ್ಲಿ, ಮಧ್ಯ ವಯಸ್ಸಿನ ಓರ್ವ ವ್ಯಕ್ತಿಯ ಮೃತದೇಹ ಕೈ, ಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿರುವುದು ಗೊತ್ತಾಗುತ್ತದೆ.

ದಾಸ್ ಅವರ ಪ್ರಕಾರ, ಹತ್ಯೆಗೂ ಮುನ್ನ ಅರ್ಚಕರಿಗೆ ಚಿತ್ರಹಿಂಸೆ ನೀಡಲಾಗಿದೆ. ಕೈ ಮತ್ತು ಕಾಲುಗಳನ್ನು ಕಟ್ಟಿರುವುದನ್ನು ನೋಡಿದರೆ ಇದು ತಿಳಿಯುತ್ತದೆ. ಬಾಂಗ್ಲಾ ಪೊಲೀಸರು ಈ ಘಟನೆಯನ್ನು 'ಲೂಟಿ ಪ್ರಕರಣ' ಎಂದು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇದೊಂದು ಲೂಟಿ/ಡಕಾಯಿತಿ ಎಂಬ ಬಾಂಗ್ಲಾ ಪೊಲೀಸರ ಹೇಳಿಕೆಗೆ ದಾಸ್ ಪ್ರತಿಕ್ರಿಯಿಸಿ, "ಹಿಂದೂಗಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿರುವ ಹಿಂಸಾಚಾರಗಳು ಮತ್ತು ಇಂಥ ದಾಳಿಗಳು ಹೇಗೆ ದರೋಡೆ ಅಥವಾ ಡಕಾಯಿತಿ ಆಗುತ್ತವೆ" ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮತ್ತೋರ್ವ ಸನ್ಯಾಸಿ ಪ್ರತಿಕ್ರಿಯಿಸಿ, "ಪರಿಸ್ಥಿತಿ ತೀರಾ ಹದಗೆಡುತ್ತಿರುವುದರಿಂದ ಇದಕ್ಕೆ ಮಾತುಕತೆಯೊಂದೇ ಪರಿಹಾರವಾಗದು. ಭಾರತದ ಸರ್ಕಾರದ ವರದಿಯಂತೆ, ಈ ವರ್ಷ ಡಿಸೆಂಬರ್ 8ರವರೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ 2,200ಕ್ಕೂ ಹೆಚ್ಚು ದಾಳಿ ನಡೆದಿದೆ. ಆದರೆ ಈ ಸಂಖ್ಯೆ ಇನ್ನೂ ಕಡಿಮೆ. ಏಕೆಂದರೆ, ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದಿಲ್ಲ" ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ