ಮಂಗಳೂರು : ಕಾರ್ಮಿಕ ವರ್ಗದ ಜನತೆ ಸಹಿತ ಪ್ರತಿಯೊಬ್ಬರ ಸ್ವಂತ ಸೂರು ಹೊಂದುವ ಕನಸು ನನಸಾಗಬೇಕು ಎಂಬ ಮೂಲ ಉದ್ದೇಶದಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಕೇವಲ ಲಾಭ ಗಳಿಕೆಗೆ ಸೀಮಿತವಾಗದೆ ಮಿತದರದಲ್ಲಿ ಫ್ಲಾೃಟ್‌ಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ ಎಂದು ರೋಹನ್ ಕಾರ್ಪೊರೇಷನ್ ಇಂಡಿಯಾ ಸಂಸ್ಥೆಯ ಸ್ಥಾಪಕ ಮತ್ತು ಚೇರ್ಮನ್ ರೋಹನ್ ಮೊಂತೆರೊ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್ ಗುರುವಾರ ಏರ್ಪಡಿಸಿದ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ವಿಪುಲ ಅವಕಾಶವಿದೆ. ಆದರೆ ಈ ಉದ್ಯಮದಲ್ಲಿ ಹಣ ಮಾಡುವುದರ ಜತೆಗೆ ಸಮಾಜಸೇವೆಯ ಮನೋಭಾವವೂ ಇರಬೇಕು ಎಂದರು. ಪ್ರಾಕೃತಿಕ ಸಂಪನ್ಮೂಲ, ವಿವಿಧ ಜಾತಿ, ಧರ್ಮ, ಭಾಷೆ, ವೃತ್ತಿ, ಉದ್ಯೋಗಗಳ ಜನರು ಇರುವ ಏಕೈಕ ನಗರ ಮಂಗಳೂರು. ಇದು ಸ್ವರ್ಗಕ್ಕೆ ಸಮಾನವಾದ ಊರಾಗಿದ್ದು, ಮಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಗೌರವ ಹೊಂದಿದ್ದೇನೆ. ಮಂಗಳೂರನ್ನೇ ದುಬೈ ಮಾಡಲು ನೋಡಬೇಕೇ ವಿನಃ ವಿದೇಶದತ್ತ ಮುಖ ಮಾಡುವುದು ಒಳ್ಳೆಯದಲ್ಲ. ಈ ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು, ವಿವಿಧ ದೇಶಗಳ ಜನರು ಇಲ್ಲಿಗೆ ಕರೆಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಪರಿಶ್ರಮದಿಂದ ನಿರ್ಮಾಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದೇನೆ. 9ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ದುಡಿಯಲು ಆರಂಭಿಸಿದೆ. ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ. ಕಲಿಯಲು ನಡೆಸಿದ ಪ್ರಯತ್ನಗಳೂ ಕೈಗೂಡಲಿಲ್ಲ. ಗದ್ದೆ ಉಳುಮೆ, ಕ್ಯಾಂಟೀನ್ ಕೆಲಸ, ಇಲೆಕ್ಟ್ರಿಶಿಯನ್, ಕ್ಯಾಟರಿಂಗ್, ಲಾರಿಗೆ ಲೋಡಿಂಗ್, ಮೇಸಿಗೆ ಹೆಲ್ಪರ್, ಲಾಂಡ್ರಿ ಅಂಗಡಿ, ಬೇಕರಿ, ಆಹಾರ ಉತ್ಪನ್ನ ಮಾರಾಟ .ಹೀಗೆ ಎಲ್ಲ ರೀತಿಯ ಕೆಲಸ ಮಾಡಿದ ಅನುಭವ ಇದೆ. ಬಳಿಕ ಬಾಡಿಗೆ ಮನೆ ಬ್ರೋಕರ್ ಆಗಿ ಕೆಲಸ ಆರಂಭಿಸಿ ಹಂತ ಹಂತವಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪದಾರ್ಪಣೆ ಮಾಡಿದೆ . ಉದ್ಯಮದಲ್ಲಿ ಸೋಲು, ಗೆಲವು ಇದ್ದದ್ದೇ. ಆದರೆ ನಾನು ಎಂದಿಗೂ ಸೋಲಲಿಲ್ಲ. ಸಣ್ಣ ಹಿನ್ನಡೆಯನ್ನು ಗೆಲುವಿಗೆ ಮುಂದಿನ ಮೆಟ್ಟಿಲು ಎಂದೇ ಭಾವಿಸಿ ಮುನ್ನಡೆದಿದ್ದೇನೆ. ರಿಯಲ್ ಎಸ್ಟೇಟ್‌ಗೆ ಯಾವತ್ತೂ ಭವಿಷ್ಯವಿದೆ. ಅದರಲ್ಲಿ ಕಾರ್ಯನಿರ್ವಹಿಸಿದರೆ ಸೋಲು ಬಾರದು ಎಂದು ರೋಹನ್ ಮೊಂತೆರೊ ತನ್ನ ಜೀವನಾನುಭವವನ್ನು ತೆರೆದಿಟ್ಟರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗ ಮುಖ್ಯಸ್ಥ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಕಾರ್ಯಕ್ರಮ ಸಂಯೋಜಕ ವಿಲ್ಪ್ರೆಡ್ ಡಿಸೋಜಾ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.
8 ಸಾವಿರ ಕೋಟಿ ರೂ. ಹೂಡಿಕೆ
ರೋಹನ್ ಕಾರ್ಪೊರೇಷನ್ ಇಂಡಿಯಾ ಸಂಸ್ಥೆಯ ಕಳೆದ 32 ವರ್ಷಗಳಲ್ಲಿ 40ಕ್ಕೂ ಅಧಿಕ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣ ಗೊಳಿಸಿದೆ. 3000ಕ್ಕೂ ಅಧಿಕ ಮನೆ ನಿರ್ಮಿಸಿದ್ದೇವೆ. ನಮ್ಮ ಸಂಸ್ಥೆಯ ಒಂದು ಯೋಜನೆಯಲ್ಲಿ ಸುಮಾರು 72 ಏಜೆನ್ಸಿಗಳು ಕೆಲಸ ಮಾಡುತ್ತಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಭವಿಷ್ಯದಲ್ಲಿ ಮಂಗಳೂರಿನ ಪಡೀಲ್, ಅಳಪೆ, ಅತ್ತಾವರ,ಯೆಯ್ಯಡಿ, ಸುರತ್ಕಲ್‌ನಲ್ಲಿ ಸುಮಾರು 8 ಸಾವಿರ ಕೋಟಿ ರೂ.ಹೂಡಿಕೆಯ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮೈಸೂರು, ಬೆಂಗಳೂರು, ಗೋವಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಚಿಂತನೆ ಇದೆ ಎಂದು ರೋಹನ್ ಮೊಂತೆರೊ ಹೇಳಿದರು.