image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭೋಧನೋಪಕರಣದಿಂದ ಕಲಿಕೆ ಉತ್ತಮ -- ಶ್ರೀ ಪ್ರಸನ್ನನಾಥ ಸ್ವಾಮೀಜಿ.

ಭೋಧನೋಪಕರಣದಿಂದ ಕಲಿಕೆ ಉತ್ತಮ -- ಶ್ರೀ ಪ್ರಸನ್ನನಾಥ ಸ್ವಾಮೀಜಿ.

ಶಿವಮೊಗ್ಗ : ಮೇ.24 ಬೋಧನೋಪಕರಣದಿಂದ ಮಕ್ಕಳಿಗೆ ಮಾಡುವ ಪಾಠ ಅತ್ಯಂತ ಉಪಯುಕ್ತವಾಗಿರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥಸ್ವಾಮೀಜಿ ಯವರು ಅಭಿಪ್ರಾಯಪಟ್ಟರು.
ಭದ್ರಾವತಿ ತಾಲ್ಲೂಕಿನ ಕಾರೇ ಹಳ್ಳಿಯಲ್ಲಿರುವ  ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಬಿಜಿಎಸ್ ಕೇದ್ರೀಯ  ಶಾಲೆಯಲ್ಲಿ ನಿನ್ನೆಯಿಂದ ಎರಡು ದಿನ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಶ್ರೀಗಳು , ಮಕ್ಕಳು ಸಹಜವಾಗಿ ಬೋಧನೋಪಕರಣದ ಕಡೆ ಆಸಕ್ತಿಯನ್ನು ವಹಿಸುತ್ತಾರೆ. ಇದನ್ನು ಉಪಯೋಗಿಸಿ ಮಾಡುವಂತಹ ಪಾಠ ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು. ಶಿಕ್ಷಕರೂ ಕೂಡ ಪ್ರತಿನಿತ್ಯ ವಿದ್ಯಾರ್ಥಿಗಳೇ, ದಿನದ 24 ಗಂಟೆಯೂ ಕೂಡ ನಿಮ್ಮಲ್ಲಿ ಕಲಿಕೆಯ ತುಡಿತವಿರಬೇಕು.ನಾನು ಎಲ್ಲವನ್ನು ಕಲಿತಿದ್ದೇನೆ, ನಾನು ಓದುವ ಸಂದರ್ಭದಲ್ಲಿ ಎಲ್ಲವನ್ನೂ ಅರಿತಿದ್ದೇನೆ ಎಂದುಕೊಂಡರೆ ನಿಮ್ಮ ಜ್ಞಾನಮಟ್ಟ ಅಂದೇ ಕುಸಿಯಲಾರಂಭಿಸುತ್ತದೆ.365 ದಿನವೂ ನೀವು ಕಲಿಕೆಯನ್ನು ಮುಂದುವರಿಸಿದ್ದೇ ಆದರೆ ಮಾದರಿ ಶಿಕ್ಷಕರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದು ಒಂದು ಕಲೆ, ಯಾವುದೋ ಒಂದು ಪರೀಕ್ಷೆಯಲ್ಲಿ ಮಗು ಶೂನ್ಯ ಅಂಕವನ್ನು ಪಡೆಯಿತು ಎಂದರೆ ಅದರ ಭವಿಷ್ಯವೇ ಮುಗಿದಂತೆ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಕರು ಮಗುವನ್ನು ಹುರಿದುಂಬಿಸುವಂತಹ ಕಾರ್ಯವನ್ನು ಮಾಡಬೇಕು.  ಪ್ರತಿಯೊಂದು ಮಗುವಿನಲ್ಲಿಯೂ ಕೂಡ ಅದರದ್ದೇ ಆದ ಜ್ಞಾನ ಮಟ್ಟವಿರುತ್ತದೆ. ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ನಿಮ್ಮದಾಗಿರುತ್ತದೆ ಎಂದು ಶಿಕ್ಷಕರಿಗೆ ತಿಳಿಸಿದರು.ಮನೆಯ ಸಮಸ್ಯೆಯನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು. ಆಟದ ಲೆಕ್ಕ ಆಟಕ್ಕೆ, ಊಟದ ಲೆಕ್ಕ ಊಟಕ್ಕೆ, ಪಾಠದ ಲೆಕ್ಕ ಪಾಠಕ್ಕೆ ಇದನ್ನು ಅರಿತು ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಬೇಕು.      ಪ್ರತಿಯೊಬ್ಬ ಮನುಷ್ಯರಿಗೂ ತನ್ನದೇ ಆದ ವೈಯಕ್ತಿಕ ಸಮಸ್ಯೆಗಳಿರುತ್ತವೆ. ಶಾಲೆಗೆ ಬರುವಾಗ ಅವುಗಳನ್ನು ಮನೆಯಲ್ಲಿಯೇ ಬಿಟ್ಟು, ಬಂದರೆ ನಿಮ್ಮ ಅಂದಿನ ಪಾಠ ಯಶಸ್ವಿಯಾಗಿ ನೆರವೇರುತ್ತದೆ ಎಂದ ಅವರು, ಮಕ್ಕಳನ್ನು ತಮ್ಮದೇ ಮಕ್ಕಳು ಎಂಬಂತೆ ನೋಡಿಕೊಂಡಾಗ ಮಾತ್ರ ಆ ಮಗುವಿನ ಶ್ರೇಯಸ್ಸು ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಶ್ರೀ ವಿಶ್ವದೇವನಂದಪುರಿ ಸ್ವಾಮೀಜಿಯವರು,  ಶ್ರೀ  ಸಾಯಿನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ  ಶಿಕ್ಷಣ ಟ್ರಸ್ಟ್  ಭದ್ರಾವತಿ ಶಾಖೆಯ ಆಡಳಿತಾಧಿಕಾರಿಗಳಾದ ಜಗದೀಶ್ ಬಿ ,  ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚೇತನಾ ಸಿ.ಹೆಚ್, ಬಿಜಿಎಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀಮತಿ ಅಮುದ ಸಿ. ಮುನಿರಾಜು , ಶಿಕ್ಷಕರು  ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ