ಒಂದು ಮನೆಯಲ್ಲಿ ಹುಟ್ಟಿ, ಯುವರಾಣಿಯಾಗಿ ಬೆಳೆದು ಇನ್ನೊಂದು ಮನೆಯನ್ನು ಬೆಳಗುವವಳೇ ಹೆಣ್ಣು. ಒಂದು ಹೆಣ್ಣಿನಿಂದ ಹೇಗೆ ಮನೆ, ಸಂಸಾರ ಸ್ವರ್ಗ ಅಥವಾ ನರಕವಾಗಲೂ ಸಾದ್ಯವೋ ಹಾಗೆ ಹೆಣ್ಣಿನ ಜೀವನದ ದಾರಿ ಸುಗಮವಾಗುವುದು ಕೈ ಹಿಡಿದ ಪತಿಯ ಮೇಲೆ ಅವಲಂಬಿಸುರುತ್ತದೆ. ನೂರಾರು ಕನಸುಗಳನ್ನು ಹೊತ್ತು ಬರುವ ಹೆಣ್ಣಿನ ಆಸೆ, ಆಕಾಂಕ್ಷೆಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸುವ ಜವಾಬ್ಧಾರಿಯ ಜೊತೆಗೆ ಸರಿಯಾದ ದಾರಿಯಲ್ಲಿ ನಡೆಸಿದರೆ ಹೆಣ್ಣು ಕೂಡ ಮದುವೆಯ ನಂತರವೂ, ಗಂಡ, ಮನೆ, ಮಕ್ಕಳ ಪಾಲನೆಯ ಜೊತೆಗೆ ಸಾಧನೆ ಮಾಡಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಹಲವಾರು ಮಹಿಳೆಯರು ಈ ಸಮಾಜದಲ್ಲಿ ಇದ್ದಾರೆ. ಅಂತವರಲ್ಲಿ ಕರಾವಳಿ ತರಂಗಿಣಿಯ ಇವತ್ತಿನ ಆಯ್ಕೆ “ವಿದ್ವಾನ್. ನಯನಾ ವಿ ರೈ”. ಪುತ್ತೂರು ತಾಲೂಕಿನ ಪಡುವನ್ನೂರಿನ ಕುದ್ಕಾಡಿಯ ಕರ್ನಾಟಕ ಕಲಾಶ್ರೀ, ಕಲಾ ಕ್ಷೇತ್ರದ ಸಾಧಕ ವಿಧ್ವಾನ್ ಕುದ್ಕಾಡಿ ವಿಶ್ವನಾಥ್ ರೈಯವರನ್ನು ೧೯೭೩ರಲ್ಲಿ ಮದುವೆಯಾದಾಗ ಇವರು ಹತ್ತನೇ ತರಗತಿ ಓದಿದ್ದರು, ನಂತರ ಪತಿಯ ಮಾರ್ಗದರ್ಶನದಂತೆ ಪಿ.ಯು.ಸಿ ಮುಂದೆ ಕುಶಾಲನಗರದ ಶ್ರೀ ಸತ್ಯಸಾಯಿ ವ್ಯಾಯಾಮ ಶಾಲೆಯಲ್ಲಿ “ಸಿ.ಪಿ.ಎಡ್” ಮುಗಿಸುವುದರೊಂದಿಗೆ, ಪತಿ ವಿ. ವಿಶ್ವನಾಥ್‌ರೈಯವರ ಮಾರ್ಗದರ್ಶನದಲ್ಲಿ ಭರತನಾಟ್ಯ ಸೀನಿಯರ್ ಮತ್ತು ವಿಧ್ವತ್ ಪೂರೈಸಿದರು.
ವಿಶ್ವನಾಥ್ ರೈ ಕುದ್ಕಾಡಿಯವರು ೧೯೫೭ರಲ್ಲಿ ಪ್ರಾರಂಬಿಸಿದ್ದ “ವಿಶ್ವಕಲಾ ನಿಕೇತನ’ ನೃತ್ಯಶಾಲೆಯನ್ನು “ವಿಶ್ವಕಲಾ ನಿಕೇತನ ಇನ್ಸಿಟ್ಯೂಟ್ ಅಪ್ ಆರ್ಟ್ಸ್ & ಕಲ್ಚರ್” ಎಂದು ಮರುನಾಮಕರಣ ಮಾಡಿ ಈ ದಂಪತಿಗಳು ಕಲಾ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರ ಶಿವಪಾರ್ವತಿ ನೃತ್ಯ ಪ್ರದರ್ಶನವು ನೃತ್ಯರಂಗದಲ್ಲಿ ಅಪೂರ್ವ ಜೋಡಿ ಎಂದು ಜನಮನ್ನಣೆ ಪಡೆದಿತ್ತು. ಇವರು ಸಾವಿರಾರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುವುದರೊಂದಿಗೆ, ಊರು ಪರವೂರುಗಳ ಕಲಾ ಪ್ರೇಮಿಗಳಿಗೆ ಕಲಾರಸದೌತಣ ಉಣಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ಶಿಷ್ಯವೃಂದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿಶ್ವಕಲಾ ನಿಕೇತನವು ೬೪ ಸಂವತ್ಸರಗಳನ್ನು ಪೂರೈಸಿ ಮುಂದೆ ಹೆಜ್ಜೆ ಇಡುತ್ತಿದ್ದು, ಪತಿ ವಿಶ್ವನಾಥ ರೈ ಕುದ್ಕಾಡಿಯವರ ಕಾಲನಂತರ ಮಗಳು ಸ್ವಸ್ತಿಕಾ ಶೆಟ್ಟಿ, ಅಪ್ಪ ಅಮ್ಮನ ಕಲಾ ಸೇವೆಯ ದಾರಿಯಲ್ಲಿ ಅಮ್ಮನ ಬೆನ್ನೆಲುಬಾಗಿ ಮುನ್ನಡೆದಿದ್ದರು.
ಒಟ್ಟಾರೆಯಾಗಿ ಕಲಾ ದೇವಿಯ ಸೇವೆಯಲ್ಲಿ ನಿರತರಾಗಿರುವ ಕಲಾಕುಟುಂಬ ಎಂದರೆ ತಪ್ಪಾಗಲಾರದು. ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ, ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ತನ್ನ ನಿವೃತ್ತಿಯ ನಂತರ ಸಂಪೂರ್ಣವಾಗಿ ನೃತ್ಯ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ೨೦೦೨ರಲ್ಲಿ ಜನ ಮೆಚ್ಚಿದ ಶಿಕ್ಷಕಿ, ಉತ್ತಮ ದೈಹಿಕ ಶಿಕ್ಷಕಿ ಪ್ರಶಸ್ತಿ ದೊರಕುವುದರೊಂದಿಗೆ, ಕಲಾ ಕ್ಷೇತ್ರದ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ವಿವಿಧ ಬಿರುದು ಬಾವಲಿಗಳು ಇವರನ್ನರಸಿ ಬಂದಿದೆ. ಇವರ ಕಲಾ ಸೇವೆಯು ಹೀಗೆ ಮುಂದುವರಿದು ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ ಎನ್ನುವುದು ಕರಾವಳಿ ತರಂಗಿಣಿಯ ಹಾರೈಕೆ.