ಬೆಂಗಳೂರು: ರಾಜ್ಯ ಕಂಡ ಅಪರೂಪದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು ಎಸ್.ಎಂ.ಕೃಷ್ಣ. ರಾಜ್ಯದ ಅಭಿವೃದ್ಧಿ ಪಥದಲ್ಲಿ ಅಚ್ಚಳಿಯದಂತಹ ಹೆಜ್ಜೆ ಗುರುತಿನ ಅವಧಿ ಅವರದು. ಅವರ ರಾಜಕೀಯ ಜೀವನ ಮತ್ತು ವೈಯಕ್ತಿಕ ಬದುಕಿನ ಅನೇಕ ಸ್ವಾರಸ್ಯಕರ ಘಟನೆಗಳ ಒಂದು ಮೆಲುಕು ನೋಟ ಇಲ್ಲಿದೆ.
ಎಸ್. ಎಂ. ಕೃಷ್ಣ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನೆಡಿ ಪರ ಪ್ರಚಾರ ನಡೆಸಿದ್ದರು. 1961ರಲ್ಲಿ ತಮ್ಮ 28ನೇ ವಯಸ್ಸಿನಲ್ಲಿ ಎಸ್.ಎಂ. ಕೃಷ್ಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಈ ವೇಳೆ ಎಸ್ಎಂಕೆ ಕೆನಡಿಗೆ ಪತ್ರ ಬರೆದು ಭಾರತೀಯರು ಹೆಚ್ಚಿರುವ ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಕೋರಿದ್ದರು. ಇದಕ್ಕೆ ಕೆನಡಿ ಒಪ್ಪಿದ್ದರು. ಎಸ್.ಎಂ. ಕೃಷ್ಣ ಅವರು ಕೆನಡಿ ಪರ ಪ್ರಚಾರ ನಡೆಸಿದ್ದಲ್ಲದೆ ಅವರ ಪರ ಮತ ಚಲಾಯಿಸಿದ್ದರು. ಬಳಿಕ ಜಾನ್ ಎಫ್. ಕೆನಡಿ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದರು. ನಂತರ ಕೆನಡಿ ಎಸ್.ಎಂ.ಕೃಷ್ಣಗೆ ವಾಪಸ್ ಪತ್ರ ಬರೆದು ಧನ್ಯವಾದ ತಿಳಿಸಿದ್ದರು.