ಸಾಗರ: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಹಿಡಿತದಲ್ಲಿದೆ. ಇದನ್ನು ಮುಕ್ತ ಮಾಡಬೇಕೆಂದು ಹೇಳುತ್ತಿದ್ದರು. ಅದರಂತೆ ರಾಜ್ಯದಲ್ಲಿ ಒಂದು ಕುಟುಂಬದ ಕೈಯಲ್ಲಿರುವ ಬಿಜೆಪಿಯನ್ನು ಅಪ್ಪ ಮಕ್ಕಳ ಕೈನಿಂದ ಮುಕ್ತ ಮಾಡಬೇಕಿದೆ ಎಂದು ಶಿವಮೊಗ್ಗ ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಕಾರೆಹೊಂಡ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಬೇಡ್ಕರ್ ಜಯಂತಿ ದಿನದಂದು ರಾಜಕಾರಣ ಮತನಾಡಲು ಇಷ್ಟವಿಲ್ಲ. ಆದರೆ, ಮಾತನಾಡುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ, ಮತ್ತೊಬ್ಬ ಮಗ ವಿಜಯೇಂದ್ರ ಅವರ ಕೈನಲ್ಲಿ ಬಿಜೆಪಿ ಇದೆ. ಅಪ್ಪ-ಮಕ್ಕಳ ಕೈಯಲ್ಲಿರುವ ಬಿಜೆಪಿ ಪಕ್ಷವನ್ನು ಅವರಿಂದ ಮುಕ್ತಗೊಳಿಸಬೇಕಿದೆ ಎಂದರು.
40 ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಅವರಿಗೆ ಬೇಕಾದವರಿಗೆ ಟಿಕೆಟ್ ಕೊಡಲಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕೆಂಬ ಅಂಬೇಡ್ಕರ್ ಬಯಕೆಯಂತೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರವೂ ಇದೇ ಅಂಶಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇನೆ. ಏ.22 ನನ್ನ ಚಿಹ್ನೆ ಏನೆಂದು ಗೊತ್ತಾಗಲಿದೆ. ನೀವೆಲ್ಲಾ ಅದೇ ಚಿಹ್ನೆಗೆ ಮತ ನೀಡಿ ಸಹಕಾರ ನೀಡಿ ಎಂದು ಮನವಿ ಮಾಡಿದರು.ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬುದು ಅಂಬೇಡ್ಕರ್ ಅವರ ಒತ್ತಾಸೆಯಾಗಿತ್ತು. ಶಿಕ್ಷಣಕ್ಕಾಗಿ ಜನರೆಲ್ಲಾ ಒಗ್ಗಟ್ಟಾಗಿ ಸಂಘಟಕರಾಗಬೇಕೆಂದು ಅಂಬೇಡ್ಕರ್ ಬಯಸಿದ್ದರು. ಹಿಂದುಳಿದವರಿಗೆ ದಲಿತರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಪೈಕಿ ಅಂಬೇಡ್ಕರ್ ಮೊದಲಿಗರು ಎಂದರು.
ಬಿಜೆಪಿ ಓಬಿಸಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೇಮಾ ರವಿ ಮಾತನಾಡಿ, ಕೆ.ಎಸ್.ಈಶ್ವರಪ್ಪರವರು ಹಿಂದುಳಿದ ವರ್ಗಗಳ ನಾಯಕ. ಅವರನ್ನು ಭೇಟಿಯಾಗಲು ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ ಸಿಗುತ್ತಾರೆ. ಯಾರೆ ಬಂದರು ಆತ್ಮೀಯವಾಗಿ ಕಾಣುತ್ತಾರೆ. ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಪೈಕಿ ಈಶ್ವರಪ್ಪ ಅತಿ ಉತ್ತಮವಾದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಬಣ್ಣಿಸಿದರು,ಬಿಜೆಪಿಯಲ್ಲಿ ಈಶ್ವರಪ್ಪನವರನ್ನು ಕಡೆಗಣಿಸಿದ ಕಾರಣದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಮೋದಿಯವರ ಸಿದ್ಧಾಂತ ಪರವಾಗಿ ಹೋರಾಟ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪರವರನ್ನು ಈ ಬಾರಿ ನೀವೆಲ್ಲಾ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಗ್ರಾಮದ ಮುಖಂಡರಾದ ಮಂಜುನಾಥ್, ಬಸವರಾಜ್, ನಾಗರಾಜ್, ಸುರೇಶ್, ಶಾಂತಮ್ಮ, ಸೀಮಾ ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು