ಮಂಗಳೂರು:ಮಹಾ ಚುನಾವಣೆಗೆ ಮೊದಲ ಹಂತ ಹಾಗೂ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಕೂಡ ಮುಗಿದಿದೆ. ಇಡೀ ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾದ ಅಲೆ ಕಾಣುತ್ತಿದೆ. ದೇಶದ ಜನ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಅಭಿವೃದ್ಧಿಶೀಲ ಭಾರತ ವಿಕಸಿತ ಭಾರತವಾಗಿ ರೂಪುಗೊಳ್ಳುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಆಡಳಿತ, ಅಭಿವೃದ್ಧಿಪರವಾಗಿರುವ ಯೋಚನೆ ಮತ್ತು ಯೋಜನೆಗಳು, ಸಾಂಸ್ಕೃತಿಕ ಭಾರತದ ಅಭಿವೃದ್ಧಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿರುವುದು, ಕೋವಿಡ್ನ ಸಂಕಟದ ಪರಿಸ್ತಿತಿಯಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿರುವುದು, ಆರ್ಥಿಕವಾಗಿ ಭಾತವನ್ನು ಮುನ್ನಡೆಸಿದ ರೀತಿ- ಇವೆಲ್ಲದರ ಪರಿಣಾಮವಾಗಿ ಜಾಗತಿಕವಾಗಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ರೂಪುಗೊಂಡಿದೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಸ್ವಚ್ಛ, ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ನೀಡಿರುವುದು, ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳು, ವೈರಿ ರಾಷ್ಟ್ರಗಳಿಗೆ ಕೊಟ್ಟಿರುವ ಎಚ್ಚರಿಕೆಗಳು, ಕಾಶ್ಮೀರ ಮತ್ತು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸನ್ನಿವೇಶಗಳನ್ನು ಚಾಣಾಕ್ಷತನದಿಂದ ನಿರ್ವಹಿಸಿದ ರೀತಿ, ಅಪೂರ್ವವಾದ ದೇಶಭಕ್ತಿ- ಇವನ್ನೆಲ್ಲ ಕಂಡ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿಸಲು ತೀರ್ಮಾನಿಸಿದ್ದಾರೆ ಎಂದು ನಳಿನ್ ಪ್ರತಿಪಾದಿಸಿದರು.
10 ವರ್ಷಗಳ ಆಡಳಿತ, ಜಗತ್ತಿನ ಅತಿ ಹೆಚ್ಚಿನ ಜನಮನ್ನಣೆ ಪಡೆದ ಜನನಾಯಕ, ವಿಶ್ವನಾಯಕ ಮೋದಿಯವರು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ. ಅವರು ಹೋದ ಸ್ಥಳಗಳಲ್ಲೆಲ್ಲ ಲಕ್ಷಾಂತರ ಜನರು ಬಂದು ಸ್ವಾಗತ ಮಾಡುವ ದೃಶ್ಯಗಳು ಎಲ್ಲೆಡೆ ಕಾಣುತ್ತಿವೆ. ಅದೇ ರೀತಿ ಕರ್ನಾಟಕದಲ್ಲೂ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನ, ಮೆಚ್ಚುಗೆ, ಜನಬೆಂಬಲ ಜಾಸ್ತಿಯಾಗಿದೆ. ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲುವುದರಲ್ಲಿ ಸಂದೇಹವಿಲ್ಲ. ಕಳೆದ 1 ವರ್ಷದಲ್ಲಿ ಕಾಂಗ್ರೆಸ್ ಸರಕಾರ ನೀಡಿರುವ ಹೀನವಾದ ಆಡಳಿತ,, ಅಭಿವೃದ್ಧಿ ಕುಂಠಿತವಾಗಿರುವುದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಬಿಡುಗಡೆ ಆಗದಿರುವುದು, ಭ್ರಷ್ಟಾಚಾರ ಮೇರೆ ಮೀರಿರುವುದು, ಯಾವುದೇ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಪಾವತಿ ಆಗದಿರುವುದು, ಕಾಂಗ್ರೆಸ್ ಸರಕಾರವೀಗ 80% ಸರಕಾರವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಜನತೆ ಇಂದು ಕಾಂಗ್ರೆಸ್ ಅನ್ನು ತಿರಸ್ಕರಿಸುವ ಪರಿಸ್ಥಿತಿಗೆ ಬಂದಿದ್ದಾರೆ. ಭ್ರಷ್ಟಾಚಾರ ರಹಿತವಾಗಿ ಪ್ರಧಾನಿ ಮೋದಿಯವರು ಕೊಟ್ಟಿರುವ ಆಡಳಿತ ಹಾಗೂ ಈಗ ಕಾಂಗ್ರೆಸ್ ನೀಡುತ್ತಿರುವ ಭ್ರಷ್ಟ ಹಾಗೂ ದುಷ್ಟ ಆಡಳಿತವನ್ನು ಜನತೆ ಹೋಲಿಕೆ ಮಾಡಿ ನೋಡುತ್ತಿದ್ದಾರೆ ಎಂದು ಸಂಸದ ನಳಿನ್ ತಿಳಿಸಿದರು.
ಹೀಗಾಗಿ 1991ನೇ ಇಸವಿಯಿಂದ ಈ ಕ್ಷೇತ್ರವನ್ನು ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತ ಬಂದಿದೆ. ಧನಂಜಯ ಕುಮಾರ್ ಅವರು 4 ಬಾರಿ, ಡಿ.ವಿ ಸದಾನಂದ ಗೌಡ ಅವರು 1 ಬಾರಿ ಹಾಗೂ ನಾನು ಮೂರು ಬಾರಿ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಇದು ಬಿಜೆಪಿಯ, ಹಿಂದುತ್ವದ ಭದ್ರಕೋಟೆಯಾಗಿ ಬೆಳೆದು ಬಂದಿದೆ. 1991ರಿಂದಲೂ ರಾಷ್ಟ್ರೀಯ ವಿಚಾರಗಳು ಬಂದಾಗ ದಕ್ಷಿಣ ಕನ್ನಡದ ಜನತೆ ಯಾವತ್ತೂ ಬಿಜೆಪಿಯ ಪರವಾಗಿ ನಿಂತಿದ್ದಾರೆ. ಜಾತಿ-ಮತಗಳ ಯಾವುದೇ ಸಂಕುಚಿತ ಭಾವನೆಗಳಿಗೂ ಒಳಗಾಗದೆ ರಾಷ್ಟ್ರಹಿತವೇ ಪರಮೋಚ್ಚ ಎಂಬ ಧ್ಯೇಯವನ್ನು ಎತ್ತಿ ಹಿಡಿದಿದ್ದಾರೆ. ಅದರ ಜತೆಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ದಕ್ಷ ಆಡಳಿತವನ್ನೂ ನೋಡಿದ್ದಾರೆ. ಈ ಜಿಲ್ಲೆಗೆ ಅವರು ಕೊಟ್ಟಿರುವಂತಹ ಪ್ರೀತಿ ಹಾಗೂ ಅಭೂತಪೂರ್ವ ಅಭಿವೃದ್ಧಿಗೆ ನೀಡಿರುವ ಅನುದಾಗಳನ್ನು ಜನತೆ ನೋಡಿದ್ದಾರೆ. ಹೀಗಾಗಿ ಬಿಜೆಪಿಯನ್ನು ಮತ್ತೆ ಗೆಲ್ಲಿಸುವ ಪಣ ತೊಟ್ಟಿದ್ದಾರೆ ಎಂದು ನಳಿನ್ ಹೇಳಿದರು.ಈಗಾಗಲೇ ನಮ್ಮ ಅಭ್ಯರ್ಥಿ ಎರಡು ಸುತ್ತಿನ ಪ್ರಚಾರ- ತಿರುಗಾಟವನ್ನು ಪೂರ್ತಿಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ್ದೇವೆ. ಕಾರ್ಯಕರ್ತರು ಮನೆ ಮನೆ ತಲುಪುವ ಕಾರ್ಯವನ್ನು ಬಹಳ ವೇಗವಾಗಿ ಮಾಡುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ವಿದೇಶಗಳಲ್ಲಿರುವ ಭಾರತೀಯರು ತಂಡ ತಂಡವಾಗಿ ಬಂದು ಬಿಜೆಪಿಯ ಪರವಾಗಿ ಪ್ರಧಾನಿ ಮೋದಿಯವರ ಪರವಾಗಿ ಸ್ವಯಂಪ್ರೇರಿತ ಪ್ರಚಾರದಲ್ಲಿ ತೊಡಗಿದ್ದಾರೆ.
ಇವೆಲ್ಲ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿದೆ. ವೈದ್ಯರು, ಎಂಜಿನಿಯರ್ಗಳು, ನಾನಾ ಬಗೆಯ ವೃತ್ತಿಪರರು ಬಿಜೆಪಿ ಪರವಾಗಿ ಪ್ರಚಾರ ನಿರತರಾಗಿದ್ದಾರೆ. ಈ ಬಾರಿ ನಮ್ಮ ಅಭ್ಯರ್ಥಿ ಮೂರು ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.ಇವೆಲ್ಲದರ ಜತೆಗೆ ಕಾರ್ಯಕರ್ತರಿಗೆ ಮತ್ತಷ್ಟು ಸ್ಫೂರ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ನಾಡಿದ್ದು 14ರಂದು ಇದೇ ಮೊದಲ ಬಾರಿಗೆ ಬೃಹತ್ ರೋಡ್ ಶೋ ನಡೆಸುತ್ತಿದ್ದಾರೆ. ಜನರು ಇರುವಲ್ಲಿಗೆ ಸ್ವತಃ ಅವರೇ ಬರುತ್ತಿದ್ದಾರೆ. 14ರಂದು ಸಂಜೆ 6 ಗಂಟೆಗೆ ನಾರಾಯಣಗುರು ವೃತ್ತದಿಂದ ಆರಂಭಿಸಿ ನವಭಾರತ ವೃತ್ತದ ವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ಅವರನ್ನು ಸ್ವಾಗತಿಸಲು ಪಕ್ಷ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ನಳಿನ್ ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ನಿಕಟಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದ್ರೆ, ಪಕ್ಷದ ಹಿರಿಯ ಮುಖಂಡ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಯತೀಶ್ ಅರ್ವಾರ, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ ಅವರು ಉಪಸ್ಥಿತರಿದ್ದರು.