ಮಂಗಳೂರು: ವಕ್ಪ್ ನೋಟೀಸ್ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ನಗರದ ಮಿನಿ ವಿಧಾನ ಸೌಧದ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಸಿದ್ದರಾಮಯ್ಯ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಮೌಲಿಗಳ ಜೊತೆಗೂಡಿ ಹೀಗೆ ಮಾಡುತ್ತಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಕೃಪಾ ಪೋಷಿತ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿದ್ದರಾಮಯ್ಯ ಪ್ರಶ್ನೆ ಕೇಳ್ತಾರೆ "ನಾವು ಆದೇಶ ವಾಪಾಸು ತೆಗೆದುಕೊಂಡರೂ, ಬಿಜೆಪಿಯವರು ಯಾಕಾಗಿ ಪ್ರತಿಭಟನೆಯನ್ನು ಮಾಡುತ್ತೆ ಅಂತ, ಸಿದ್ದರಾಮಯ್ಯನವರೆ ನಾವು ಪ್ರತಿಭಟನೆ ಮಾಡದೇ ಇದ್ದರೆ, ನೀವು ಆದೇಶ ವಾಪಾಸು ತೆಗೆದುಕೊಳ್ತಾ ಇದ್ರ ಅಂತ ಪ್ರಶ್ನಿಸಿದರು. ನಂತರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮಾತನಾಡಿ, ಸದ್ಯ ಹಿಂದೂಗಳಿಗೆ ತಮ್ಮ ಆಸ್ತಿ ತಮ್ಮ ಹೆಸರಿನಲ್ಲಿ ಇದೆಯೇ ಎಂಬ ಭೀತಿಯ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ. ತಮ್ಮ ಜಮೀನು ವಕ್ಸ್ ಆಸ್ತಿಯಲ್ಲ, ತಮಗೆ ಸೇರಿದ್ದು ಎಂಬುದನ್ನು ಜಾಗದ ಮಾಲಕ ನಿರೂಪಿಸಬೇಕಾಗುತ್ತದೆ.
ಇದು ಬರೀ ರಾಜ್ಯದ ಸಮಸ್ಯೆಯಲ್ಲ, ಇಡೀ ದೇಶದ ಸಮಸ್ಯೆಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಸಮಸ್ಯೆಯನ್ನು ಇಡೀ ದೇಶದಲ್ಲಿ ಹುಟ್ಟುಹಾಕಲಾಗಿದೆ ಎಂದರು. ಸಾವಿರಾರು ವರ್ಷಗಳ ಹಿಂದಿನ ದೇವಾಲಯಗಳ ಭೂಮಿ ತಮ್ಮದೆಂದು ವಕ್ಸ್ ಹೇಳುತ್ತಿದೆ. ಕ್ರೈಸ್ತರ ಭೂಮಿಯನ್ನು ವಕ್ಸ್ ತನ್ನದಾಗಿಸಿಕೊಂಡಿದೆ. ಕೇಂದ್ರ ಸರಕಾರ ವಕ್ಸ್ ಆಸ್ತಿಗೆ ಕೆಲವೊಂದು ತಿದ್ದುಪಡಿ ಮಾಡಲಾಗುತ್ತಿದೆ. ಈ ತಿದ್ದುಪಡಿಗಿಂತ ಮೊದಲು ಜಮೀರ್ ಹಾಗೂ ಸಿದ್ದರಾಮಯ್ಯ ಮುಸ್ಲಿಂ ಮತಗಳ ಓಲೈಕೆಗಾಗಿ ಲ್ಯಾಂಡ್ ಜಿಹಾದ್ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರಕಾರವೇ ರಾಜ್ಯದಲ್ಲಿ ಆಡಳಿತದಲ್ಲಿ ಇರೋದಲ್ಲ. ಮುಂದೆ ಬಿಜೆಪಿ ಸರಕಾರವೂ ಆಡಳಿತ ಮಾಡಲಿದೆ ಎಂಬುದನ್ನು ಅಧಿಕಾರಿಗಳು ನೆನಪಿಟ್ಟುಕೊಳ್ಳಲಿ ಎಂದು ಭರತ್ ಶೆಟ್ಟಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.