image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುವಕರಿಗೆ ಉದ್ಯೋಗ ಸೃಷ್ಟಿಸಲು, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಯುವಕರಿಗೆ ಉದ್ಯೋಗ ಸೃಷ್ಟಿಸಲು, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು: "ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಳನಾಡಿನಲ್ಲಿ ಮನಸು ಮನಸುಗಳ ನಡುವೆ ಶಾಂತಿ ಕದಡಿ ಹೋಗಿದೆ. ಇದು ಸರಿ ಹೋಗಲು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಆಲೋಚನೆ ಹೊಂದಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಪುತ್ತೂರಿನ ಕೊಂಬೆಟ್ಟುವಿನ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ, ಶಾಸಕ ಅಶೋಕ್ ರೈ ಅವರ ಸಾರಥ್ಯದ ರೈ ಎಸ್ಟೇಟ್ಸ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ "ಅಶೋಕ ಜನ-ಮನ" ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, "ದಕ್ಷಿಣ ಕನ್ನಡ ಜಿಲ್ಲೆ ಬರಡು ಭೂಮಿಯಂತಾಗುತ್ತಿದೆ. ಕೋಮು ಗಲಭೆ ಸೇರಿದಂತೆ ಇತರ ಸಮಸ್ಯೆಗಳಿಂದಾಗಿ ವಿದ್ಯಾಸಂಸ್ಥೆಗಳಿಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿಲ್ಲ. ಇಲ್ಲಿ ಹುಟ್ಟಿದ ಅನೇಕ ಬ್ಯಾಂಕ್ ಗಳು ಮಾಯವಾಗಿವೆ. ಇಲ್ಲಿನ ಯುವಕರು ಸೌದಿ ಅರೇಬಿಯಾ, ಮುಂಬೈ, ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಆದ ಕಾರಣಕ್ಕೆ ಈ ಭಾಗದ ನಾಯಕರು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ  ನೀಡಿ ಎಂದು ಸಲಹೆ ಕೊಟ್ಟಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ದೇವಸ್ಥಾನಗಳಿವೆ, ಸಮುದ್ರ ತೀರವಿದೆ. ಹಾಗಾಗಿ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಕ್ರಮ ವಹಿಸಲಾಗುವುದು. ಅತಿ ದೊಡ್ಡ ಬಂದರು ಇದ್ದರೂ ಸಹ ಮಂಗಳೂರಿನಲ್ಲಿ ಉತ್ತಮವಾದ ಫೈವ್ ಸ್ಟಾರ್ ಹೋಟೆಲ್ ಗಳಿಲ್ಲ.

ಪುತ್ತೂರಿನ ಅಭಿವೃದ್ಧಿಗೆ ಅಶೋಕ್ ರವರು ಅನೇಕ ಯೋಜನೆಗಳನ್ನು ಇಟ್ಟುಕೊಂಡು ಮನವಿ ಮಾಡಿದ್ದಾರೆ. ಉಪಚುನಾವಣೆ ಇರುವ ಕಾರಣ ಈಗ ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ. ಅವರ ಮನವಿಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಎರಡು ಸ್ಥಾನಗಳಷ್ಟೇ ಸಿಕ್ಕಿರಬಹುದು. ಆದರೆ ನಾವು ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತೇವೆ. ಅನೇಕ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿವೆ. ನಾನು ಅಶೋಕ್ ರೈ ಅವರ ಬಾಂಧವ್ಯಕ್ಕೆ ಕಟ್ಟು ಬಿದ್ದು ಪುತ್ತೂರಿಗೆ ಬಂದಿದ್ದೇನೆ. ಪುರಂದರ ದಾಸರ ಕೀರ್ತನೆಯಂತೆ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ,  ಪದುಮ ನಾಭನ ಪಾದ ಭಜನೆ ಪರಮ ಸುಖವಯ್ಯ. ಪುತ್ತೂರಿನಲ್ಲಿ ಎಲ್ಲಾ ಸಮಾಜದವರನ್ನು ಪಕ್ಷಾತೀತವಾಗಿ ಭೇಟಿ ಮಾಡುವಂತಹ ಭಾಗ್ಯವನ್ನು ಅಶೋಕ್ ರೈ ಅವರು ನನಗೆ ಒದಗಿಸಿ ಕೊಟ್ಟಿದ್ದಾರೆ. 

ಅಶೋಕ್ ರೈ ಅವರು ಮಾಡುತ್ತಿರುವ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸಲು ಇಡೀ ಸರ್ಕಾರವೇ ಅವರ ಜೊತೆಗಿದೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಅಮ್ಮ ನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಭಕ್ತಿಯ ನೆನಪು ದೇವರ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವವು ಮೋಕ್ಷಕ್ಕೆ ಮೂಲ. 

ಶಾಸಕ ಅಶೋಕ್ ರೈ ಅವರು ತಂದೆ, ತಾಯಿಗಳ ನೆನಪಿಗೆ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅದೃಷ್ಟವಂತ ಎಂದರೆ ಅವಕಾಶಗಳಿಗೆ ಕಾಯುವನಲ್ಲ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವನು. ಇಂತಹ ಜನಸೇವೆಯನ್ನು ಸೃಷ್ಟಿಸಿಕೊಂಡು ಕಳೆದ 12 ವರ್ಷಗಳಿಂದ ಸತತವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ,  ಗುರು, ದೇವರ ಹಾಗೂ ಸಮಾಜದ ಋಣದಲ್ಲಿ ಹುಟ್ಟುತ್ತಾನೆ. ಈ ಋಣಗಳನ್ನು ಧರ್ಮದಿಂದ ತೀರಿಸಬೇಕು ಎಂದು ಅಶೋಕ್ ರೈ ಅವರು ಸಮಾಜ ಸೇವೆ ಹಾಗೂ ಜನರ ಸೇವೆ ಮೂಲಕ ಕೆಲಸ ಮಾಡುತ್ತಿದ್ದಾರೆ. 

ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರಿಯಿಲ್ಲ, ನಂಬಿಗೆಗಿಂತ ಅಧಿಕ ಗುಣವಿಲ್ಲ, ಶಂಭುವಿಗಿಂತ ಅಧಿಕ ದೇವರಿಲ್ಲ. ಹುಳಿಗಳಲ್ಲೇ ನಿಂಬೆಹುಳಿ ಶ್ರೇಷ್ಠ. ದಿವ್ಯ ಕಪ್ಪು ಶ್ರೇಷ್ಠವಂತೆ ಜೊತೆಗೆ ಶಿವನೇ ಎಲ್ಲಾ ದೇವರಿಗಿಂತ ಶ್ರೇಷ್ಠ ದೇವರಂತೆ. ಅದೇ ರೀತಿ ನಂಬಿಕೆಗಿಂತ ದೇವರಿಲ್ಲ ಎಂದು ಸರ್ವಜ್ಞ ಹೇಳಿದ್ದಾನೆ. ಅಶೋಕ್ ರೈ ಮತ್ತು ಅವರ ಕುಟುಂಬ ಪುತ್ತೂರಿನ ಜನತೆ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ನೀವು ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. 

ಅಶೋಕ್ ರೈ ಅವರದ್ದು ಗುಡುಗು ಸಿಡಿಲಿನಂತಹ ಮಾತು. ಅವರ ಮಾತಿಗೆ ಮಳೆ ಬರುತ್ತದೆ ಎಂದು ಭಾವಿಸಿಕೊಂಡೆ. ಮಾತಿನಲ್ಲಿ ಹೇಗೆ ವೇಗವಿದೆಯೋ, ಅದೇ ರೀತಿ ಕೆಲಸದಲ್ಲಿಯೂ ವೇಗವಿದೆ. ಕ್ಷೇತ್ರದ ಹಿತಕ್ಕಾಗಿ ಅವರನ್ನು ವಿಧಾನಸೌಧಕ್ಕೆ ಕಳಿಸಿ ಕೊಟ್ಟಿರುವುದಕ್ಕೆ ಇಲ್ಲಿನ ಜನತೆಗೆ ಅಭಿನಂದನೆಗಳು. 

ಕ್ಷೇತ್ರದ ಅಭಿವೃದ್ಧಿಗೆ ನನ್ನ ಬಳಿ ಜಗಳ

ಪುತ್ತೂರು ಕ್ಷೇತ್ರದ ಅಭಿವೃದ್ಧಿಗಾಗಿ, ಅಶೋಕ್ ಅವರು ನನ್ನ ಬಳಿ ಬಂದು ಆಗಾಗ್ಗೆ ಜಗಳ ಮಾಡುತ್ತಿರುತ್ತಾರೆ. ಅದಕ್ಕೆ ನಾನು, ಸ್ವಲ್ಪ ನಿಧಾನವಾಗಿ ಹಾಗೂ ತಾಳ್ಮೆಯಿಂದ ಕೆಲಸ ಮಾಡು ಎಂದು ಸಲಹೆ ನೀಡುತ್ತಿರುತ್ತೇನೆ. ಐದು ವರ್ಷಗಳ ಕೆಲಸವನ್ನು ಒಂದೇ ವರ್ಷ ಮಾಡಬೇಡ. ಗುರಿ ಇಟ್ಟುಕೊಂಡು ವರ್ಷಕ್ಕೆ ಇಂತಿಷ್ಟು ಕೆಲಸ ಮಾಡಬೇಕು. ಆಗ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಕಾರಣಕ್ಕಾಗಿ ಕಳೆದ ಎಂಟು ವಿಧಾನಸಭೆ ಚುನಾವಣೆಯನ್ನು ಗೆದ್ದಿದ್ದೇನೆ. 

ನಮಗೆ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಈ ಎಲ್ಲಾ ಗುಣಗಳು ಅಶೋಕ್ ರೈ ಅವರ ಬಳಿ ಇದೆ ಎಂದು ಭಾವಿಸಿದ್ದೇನೆ. 

ಕಾರ್ಯಕ್ರಮದಲ್ಲಿ ಹಿರಿಯ ನಾಯಕರಿದ್ದರು ಸಹ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ಗುರುಗಳಿಂದ ಭಾಷಣ ಕೊಡಿಸಲಾಯಿತು. ಏಕೆಂದರೆ ಧರ್ಮ ನೂರಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಭಕ್ತಿ ಯಾವುದಾದರೂ ಪೂಜೆ ಒಂದೇ, ಕರ್ಮ ಹಲವಾರು ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಈ ತತ್ವದ ಮೇಲೆ ನಂಬಿಕೆ ಇಟ್ಟವರು ಅಶೋಕ್ ರೈ ಎಂದರು.

 

 

Category
ಕರಾವಳಿ ತರಂಗಿಣಿ