ನವದೆಹಲಿ : ದೇಶದ ರಕ್ಷಣೆಗಾಗಿ ಧೈರ್ಯ ಮತ್ತು ತ್ಯಾಗ ಮೆರೆದ ಚಕ್ರ ಸರಣಿಯ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ವಂದೇ ಭಾರತ್ ಸೇರಿದಂತೆ ದೇಶದ ಎಲ್ಲಾ ರೈಲುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ರಕ್ಷಣಾ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರೈಲ್ವೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಭಾರತೀಯ ಸೇನೆಯು ಬುಧವಾರ ಎಕ್ಸ್ ಮೂಲಕ ಮಾಹಿತಿ ನೀಡಿದೆ.
ಈವರೆಗೆ ಕೆಲವು ನಿರ್ದಿಷ್ಟ ರೈಲುಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ಈಗ ಎಲ್ಲಾ ರೈಲುಗಳಿಗೂ ವಿಸ್ತರಿಸಲಾಗಿದ್ದು, ಯೋಧರಿಗೆ ಹಿಂದಿನಿಂದ ನೀಡಲಾಗುತ್ತಿದ್ದ ಇತರ ಪ್ರಯಾಣದ ಸೌಲಭ್ಯಗಳಲ್ಲಿ ಯಾವುದೇ ಕಡಿತ ಅಥವಾ ಬದಲಾವಣೆ ಇರುವುದಿಲ್ಲ.
ಪರಮವೀರ ಚಕ್ರ, ಅಶೋಕ ಚಕ್ರ, ಮಹಾವೀರ ಚಕ್ರ, ಕೀರ್ತಿ ಚಕ್ರ, ವೀರ ಚಕ್ರ ಮತ್ತು ಶೌರ್ಯ ಚಕ್ರ—ಈ ಆರು ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಈ ಸೌಲಭ್ಯ ಅನ್ವಯವಾಗಲಿದೆ. 1950ರ ಜನವರಿ 26ರಂದು ಸ್ಥಾಪನೆಯಾದ (1947ರ ಆಗಸ್ಟ್ 15ರಿಂದ ಪೂರ್ವಾನ್ವಯ) ಪರಮವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳ ಜೊತೆಗೆ, ನಂತರ ಜಾರಿಗೆ ಬಂದ ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪುರಸ್ಕೃತರೂ ಇದರ ವ್ಯಾಪ್ತಿಗೆ ಬರುತ್ತಾರೆ.
ಹಿಂದಿನ ನಿಯಮದಂತೆ ಅರ್ಹ ಪುರಸ್ಕೃತರಿಗೆ ಜೀವನಪರ್ಯಂತ ಉಚಿತ ಪ್ರಯಾಣಕ್ಕಾಗಿ ಕಾಂಪ್ಲಿಮೆಂಟರಿ ಕಾರ್ಡ್ ಪಾಸ್ ನೀಡಲಾಗುತ್ತಿತ್ತಾದರೂ, ರೈಲು ಮತ್ತು ವರ್ಗದ ಮೇಲೆ ಕೆಲವು ನಿರ್ಬಂಧಗಳಿದ್ದವು. 2014ರ ಫೆಬ್ರವರಿಯಲ್ಲಿ ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕೃತರಿಗೆ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್ಪ್ರೆಸ್ಗಳಲ್ಲಿ ಫಸ್ಟ್ ಎಸಿ ಅಥವಾ ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಬಳಿಕ 2017ರ ಆಗಸ್ಟ್ನಲ್ಲಿ ಅಶೋಕ ಚಕ್ರ ಮತ್ತು ಕೀರ್ತಿ ಚಕ್ರ ಪುರಸ್ಕೃತರಿಗೂ ಈ ಸೌಲಭ್ಯ ವಿಸ್ತರಿಸಲಾಗಿತ್ತು.
ದೇಶದ ಗಡಿಯಲ್ಲಿ ಹಗಲಿರುಳು ಕಾವಲು ಕಾಯುವ ವೀರ ಯೋಧರ ಸೇವೆಗೆ ಗೌರವವಾಗಿ ಕೈಗೊಂಡಿರುವ ಈ ಕ್ರಮದಿಂದ ಪುರಸ್ಕೃತರ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.