image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನವೆಂಬರ್ 30ರಂದು ಬೃಹತ್ ದಕ್ಷಿಣ ಕನ್ನಡ ವಿಭಾಗೀಯ ಮಟ್ಟದ ಉದ್ಯೋಗ ಮೇಳ: 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ

ಮಂಗಳೂರಿನಲ್ಲಿ ನವೆಂಬರ್ 30ರಂದು ಬೃಹತ್ ದಕ್ಷಿಣ ಕನ್ನಡ ವಿಭಾಗೀಯ ಮಟ್ಟದ ಉದ್ಯೋಗ ಮೇಳ: 10 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ

ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ನವೆಂಬರ್ 30ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಆವರಣದಲ್ಲಿ ಬೃಹತ್ ದಕ್ಷಿಣ ಕನ್ನಡ ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ ತಿಳಿಸಿದರು. ಅವರು  ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,  2023-24ನೇ ಸಾಲಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ 11ಕ್ಕೂ ಹೆಚ್ಚು ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದುವರೆಗೆ 18,021 ಅಭ್ಯರ್ಥಿಗಳಿಗೆ ಉದ್ಯೋಗದ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೌಶಲ್ಯ ಶೃಂಗಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು 'ಉದ್ಯೋಗ ಸೇತು' ಪೋರ್ಟಲ್‌ಗೆ ಚಾಲನೆ ನೀಡಿದ್ದು, ಆ ಮೂಲಕ ನಡೆಯುತ್ತಿರುವ ಮೊದಲ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ಇದಾಗಿದೆ ಎಂದು ಅವರು ವಿವರಿಸಿದರು.

ಈ ಉದ್ಯೋಗ ಮೇಳದಲ್ಲಿ ಉತ್ಪಾದನೆ, ಆಟೋಮೋಟಿವ್, ಬ್ಯಾಂಕಿಂಗ್, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಹಣಕಾಸು ಸೇವೆಗಳು ಸೇರಿದಂತೆ ವಿವಿಧ ವಲಯಗಳ ಒಟ್ಟು 314 ಕಂಪನಿಗಳು ಭಾಗವಹಿಸಲು ನೋಂದಾಯಿಸಿಕೊಂಡಿದ್ದು, 10,000ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಬೇಡಿಕೆ ಇರುವುದಾಗಿ ತಿಳಿಸಿವೆ. ಅಕ್ಸೆಂಚರ್, ಆಕ್ಸಿಸ್ ಬ್ಯಾಂಕ್, ಫಾಕ್ಸ್‌ಕಾನ್, ಐಸಿಐಸಿಐ ಬ್ಯಾಂಕ್, ಕಿಯಾ ಇಂಡಿಯಾ, ಎಲ್ ಆಂಡ್ ಟಿ ಫೈನಾನ್ಸ್, ರಿಲಯನ್ಸ್ ರಿಟೇಲ್, ಶ್ನೇಯ್ಡರ್ ಎಲೆಕ್ಟ್ರಿಕ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಸ್ಥಳದಲ್ಲೇ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿವೆ. ಕನಿಷ್ಠ ವಿದ್ಯಾರ್ಹತೆಯಾದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾದಿಂದ ಹಿಡಿದು ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ (PhD) ಪದವೀಧರರವರೆಗೆ ಎಲ್ಲರಿಗೂ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ.

ಮೇಳದಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ 10,697ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆಸಕ್ತ ಅಭ್ಯರ್ಥಿಗಳು 'ಯುವ ಉದ್ಯೋಗ ಸೇತು' ಪೋರ್ಟಲ್ (https://yuvaundyogasethu.karnataka.gov.in/services/events) ಮೂಲಕ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ನೇರವಾಗಿ (Walk-in) ಬಂದು ಭಾಗವಹಿಸಬಹುದು. ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಯುವಕ-ಯುವತಿಯರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.
ಈ ಬೃಹತ್ ಉದ್ಯೋಗ ಮೇಳವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಘನ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಮಂಗಳೂರು ರೈಲು ನಿಲ್ದಾಣದಿಂದ ಸೇಂಟ್ ಅಲೋಶಿಯಸ್ ಕಾಲೇಜಿನವರೆಗೆ ಉಚಿತ ಫೀಡರ್ ಬಸ್ ಸೇವೆ, ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ವಿಶೇಷ ನೋಂದಣಿ ಕೌಂಟರ್‌ಗಳ ವ್ಯವಸ್ಥೆಯನ್ನು ಜಿಲ್ಲಾಡಳಿತವು ಕಲ್ಪಿಸಿದೆ ಎಂದು  ತಿಳಿಸಿದರು.

Category
ಕರಾವಳಿ ತರಂಗಿಣಿ