image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

37 ವರ್ಷಗಳಲ್ಲೇ ಮೊದಲು: ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿಕೆ

37 ವರ್ಷಗಳಲ್ಲೇ ಮೊದಲು: ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿಕೆ

ನವದೆಹಲಿ : ಕಳೆದ 37 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪಾಕಿಸ್ತಾನದ ಪರೋಕ್ಷ ಯುದ್ಧಕ್ಕೆ ಬೆಂಬಲವಾಗಿ ನಿಲ್ಲಲು ಕಾಶ್ಮೀರ ಕಣಿವೆಯಲ್ಲಿ ಒಬ್ಬನೇ ಒಬ್ಬ ಸ್ಥಳೀಯ ಭಯೋತ್ಪಾದಕ ಉಳಿದಿಲ್ಲ. ಇತ್ತೀಚೆಗೆ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಲ್‌ಇಟಿ (LeT) ಕಮಾಂಡರ್ ಲತೀಫ್ ಭಟ್ ಹತ್ಯೆಯಾಗುವುದರೊಂದಿಗೆ, ಕಣಿವೆಯ ಕೊನೆಯ ಸ್ಥಳೀಯ ಉಗ್ರನ ಅಧ್ಯಾಯವೂ ಅಂತ್ಯಗೊಂಡಿದೆ ಎಂದು ವರದಿಯಾಗಿದೆ. 

ಕಣಿವೆಯಲ್ಲಿ ಸ್ಥಳೀಯ ಯುವಕರ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ, ಚಳಿಗಾಲದ ಹಿಮಪಾತದಿಂದ ಪರ್ವತ ಮಾರ್ಗಗಳು ಮುಚ್ಚಿಹೋಗುವ ಮುನ್ನವೇ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ತನ್ನದೇ ಉಗ್ರರನ್ನು ಒಳನುಸುಳಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನಾಧಿಕಾರಿಗಳು, ಪಿರ್ ಪಂಜಾಲ್‌ನ ಉತ್ತರ ಭಾಗದಲ್ಲಿ ಸಕ್ರಿಯವಾಗಿರಬಹುದಾದ ಸುಮಾರು 35 ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಭದ್ರತಾ ಪಡೆಗಳು ತೀವ್ರ ನಿಗಾ ಇರಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳಿಗೆ ಸ್ಥಳೀಯ ಯುವಕರು ಸೇರುವ ಪ್ರಮಾಣ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಕುಸಿದಿರುವುದನ್ನು ಅಂಕಿ-ಅಂಶಗಳು ದೃಢಪಡಿಸುತ್ತವೆ. 2018ರಲ್ಲಿ 196 ಸ್ಥಳೀಯ ಯುವಕರು ಉಗ್ರ ಸಂಘಟನೆಗಳನ್ನು ಸೇರಿದ್ದರೆ, ಈ ಸಂಖ್ಯೆ 2021ರಲ್ಲಿ 146ಕ್ಕೆ ಹಾಗೂ 2022ರಲ್ಲಿ 121ಕ್ಕೆ ಇಳಿದಿತ್ತು. ತದನಂತರ 2023ರಲ್ಲಿ ಕೇವಲ 19, 2024ರಲ್ಲಿ 4 ಮತ್ತು 2025ರಲ್ಲಿ ಕೇವಲ ಒಬ್ಬ ಯುವಕ ಮಾತ್ರ ಉಗ್ರರ ಪಾಳಯ ಸೇರಿದ್ದನು.

ಪ್ರಸಕ್ತ 2026ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಸಂಪೂರ್ಣ ಶೂನ್ಯಕ್ಕೆ ತಲುಪಿದೆ. ಲತೀಫ್ ಭಟ್ ಎನ್‌ಕೌಂಟರ್ ಬಳಿಕ ಕಣಿವೆಯು ಸ್ಥಳೀಯ ಉಗ್ರರ ಹಾವಳಿಯಿಂದ ಸಂಪೂರ್ಣ ಮುಕ್ತವಾಗಿದ್ದು, ಭದ್ರತಾ ಪಡೆಗಳಿಗೆ ಇದೊಂದು ಐತಿಹಾಸಿಕ ಯಶಸ್ಸಾಗಿದೆ.

Category
ಕರಾವಳಿ ತರಂಗಿಣಿ