image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟಿನ ಸಮಯ ರಾತ್ರಿ 11.45ರವರೆಗೆ ವಿಸ್ತರಣೆ: ಪೊಲೀಸ್ ಆಯುಕ್ತರ ಆದೇಶ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟಿನ ಸಮಯ ರಾತ್ರಿ 11.45ರವರೆಗೆ ವಿಸ್ತರಣೆ: ಪೊಲೀಸ್ ಆಯುಕ್ತರ ಆದೇಶ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಿಂದೆ ರಾತ್ರಿ 10.30ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಇದ್ದು, ಈಗ ಆ ಸಮಯವನ್ನು ರಾತ್ರಿ 11.45ರವರೆಗೆ ವಿಸ್ತರಿಸಿ, ರಾತ್ರಿ 11.45ರಿಂದ ಮಾರನೇ ದಿನ ಬೆಳಿಗ್ಗೆ 05.30ರವರೆಗೆ ವ್ಯಾಪಾರ ವಹಿವಾಟು ನಿರ್ಬಂಧಿಸಿ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರು ಆದೇಶ ಹೊರಡಿಸಿದ್ದಾರೆ. ನವೆಂಬರ್ 23, 2026ರಂದು ಹೊರಡಿಸಲಾದ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಕಲಂ 31(W) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ನಗರವು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿರ್ಬಂಧ ವಿಧಿಸಲಾಗಿದೆ.

ರಾತ್ರಿ ವೇಳೆ ವ್ಯಾಪಾರ ವಹಿವಾಟು ನಡೆಯುವುದರಿಂದ ಜನರ ಅನಗತ್ಯ ಗುಂಪುಗೂಡುವಿಕೆ, ಓಡಾಟ ಮತ್ತು ಸಾಮಾಜಿಕ ಜಾಲತಾಣಗಳ ವದಂತಿಗಳಿಂದ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ವಹಿಸಲಾಗಿದೆ. ಜೊತೆಗೆ ರಾತ್ರಿ ವೇಳೆ ತೆರೆದಿರುವ ಅಂಗಡಿ, ಹೋಟೆಲ್ ಮತ್ತು ವಾಣಿಜ್ಯ ಕೇಂದ್ರಗಳ ಬಳಿ ಮಾದಕ ವ್ಯಸನಿಗಳು, ಸಮಾಜಘಾತಕ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಾ ಕಾಲಹರಣ ಮಾಡುವುದರಿಂದ ಅಪರಾಧ ಚಟುವಟಿಕೆಗಳಿಗೆ ಅವಕಾಶ ದೊರೆಯುವುದನ್ನು ತಡೆಯುವ ಉದ್ದೇಶವೂ ಇದೆ. ಅಲ್ಲದೆ, ರಾತ್ರಿ ವೇಳೆ ವಾಹನ ನಿಲುಗಡೆ, ಜೋರಾದ ಶಬ್ದ, ಗದ್ದಲ ಮತ್ತು ರಸ್ತೆಯಲ್ಲಿ ಜನರ ಗುಂಪುಗೂಡುವಿಕೆಯಿಂದ ಆಸ್ಪತ್ರೆ ರೋಗಿಗಳಿಗೆ ಹಾಗೂ ವಸತಿ ಪ್ರದೇಶಗಳ ಜನರ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾಗುವುದನ್ನು ತಪ್ಪಿಸಲು ಈ ಆದೇಶ ಹೊರಡಿಸಲಾಗಿದೆ.


ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವ್ಯಾಪಾರಿಕ ಸಂಸ್ಥೆಗಳು, ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಮತ್ತು ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಈ ನಿರ್ಬಂಧ ಅನ್ವಯಿಸುತ್ತದೆ. ಆದರೆ, ಸಿಎಲ್-4, ಸಿಎಲ್-6(a), ಸಿಎಲ್-7 ಲೈಸೆನ್ಸ್ ಹೊಂದಿದವರಿಗೆ ಈ ಆದೇಶ ಅನ್ವಯಿಸುವುದಿಲ್ಲ; ಅವರು ಲೈಸೆನ್ಸ್‌ನಲ್ಲಿ ನಿಗದಿಪಡಿಸಲಾದ ನಿಯಮಗಳನ್ನು ಪಾಲಿಸಬೇಕು. ಇದರ ಜೊತೆಗೆ ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಉಪಯೋಗಿತಾ ಸೇವೆಗಳು ಹಾಗೂ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ಪಡೆದ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ.

Category
ಕರಾವಳಿ ತರಂಗಿಣಿ