image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೂಡಿಕೆ ಆಕರ್ಷಣೆ ಮತ್ತು ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ಹೂಡಿಕೆ ಆಕರ್ಷಣೆ ಮತ್ತು ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ಮೊತೊಮಚಿ :ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಕೈಗಾರಿಕಾ ಅಭಿವೃದ್ಧಿಯನ್ನು ಕೇವಲ ರಾಜಧಾನಿ ಬೆಂಗಳೂರಿಗೆ ಸೀಮಿತಗೊಳಿಸದೆ, ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲು ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸೋಮವಾರ ಜಪಾನ್‌ನ ನಗೋಯಾ ಸಮೀಪದ ಮೊತೊಮಚಿಯಲ್ಲಿರುವ ಟೊಯೊಟಾ ಮೋಟಾರ್ ಕಾರ್ಪೊರೇಷನ್‌ನ ಪ್ರತಿಷ್ಠಿತ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಮತ್ತು ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗದೊಂದಿಗೆ ತೆರಳಿದ್ದ ಸಿಎಂ, ಟೊಯೊಟಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಸಕಾಜು ಯೋಶಿಮುರಾ ಸೇರಿದಂತೆ ಕಂಪನಿಯ ಉನ್ನತ ಪ್ರತಿನಿಧಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಭಾರತದಲ್ಲಿ ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ ಹತ್ತು ಲಕ್ಷಕ್ಕೆ (ಒನ್ ಮಿಲಿಯನ್) ಹೆಚ್ಚಿಸಲು ಟೊಯೊಟಾ ಸಂಸ್ಥೆ ಯೋಜನೆ ರೂಪಿಸಿದ್ದು, ಕರ್ನಾಟಕದಲ್ಲಿ ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ಬೆಂಬಲ ಹಾಗೂ ಸೌಲಭ್ಯಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿಗಳು ಈ ವೇಳೆ ಭರವಸೆ ನೀಡಿದರು. ಅಲ್ಲದೆ, 2027ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ'ದಲ್ಲಿ (Global Investors Meet) ಪಾಲ್ಗೊಳ್ಳುವಂತೆ ಹಾಗೂ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಮಾಡುವಂತೆ ಟೊಯೊಟಾ ಮುಖ್ಯಸ್ಥರಿಗೆ ಅಧಿಕೃತ ಆಹ್ವಾನ ನೀಡಿದರು.

ಸಭೆಯ ಬಳಿಕ 1959ರಲ್ಲಿ ಸ್ಥಾಪನೆಯಾದ ಏಷ್ಯಾದ ಮೊದಲ ಹಾಗೂ ಟೊಯೊಟಾದ ಪ್ರಮುಖ ಪ್ರಯಾಣಿಕ ಕಾರು ತಯಾರಿಕಾ ಘಟಕವಾದ ಮೊತೊಮಚಿ ಘಟಕವನ್ನು ನಿಯೋಗವು ವೀಕ್ಷಿಸಿತು. ಇಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್, ಬ್ಯಾಟರಿ ಎಲೆಕ್ಟ್ರಿಕ್ ಹಾಗೂ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ತಂತ್ರಜ್ಞಾನ ಮತ್ತು ಉತ್ಪಾದನಾ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ, ಟೊಯೊಟಾದ 'ಗ್ಲೋಬಲ್ ಸ್ಕಿಲ್-ಅಪ್' (Global Skill-up) ತರಬೇತಿ ಕಾರ್ಯಕ್ರಮದಡಿ ಜಪಾನ್‌ನಲ್ಲಿ ವಿಶೇಷ ತಾಂತ್ರಿಕ ತರಬೇತಿ ಪಡೆಯುತ್ತಿರುವ ರಾಮನಗರ ಜಿಲ್ಲೆಯ ಬಿಡದಿ ಟೊಯೊಟಾ ಘಟಕದ 20ಕ್ಕೂ ಹೆಚ್ಚು ಐಟಿಐ (ITI) ಪ್ರಶಿಕ್ಷಣಾರ್ಥಿಗಳೊಂದಿಗೆ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಸಂವಾದ ನಡೆಸಿದರು. ತರಬೇತಿದಾರರ ಕಲಿಕಾ ಅನುಭವಗಳನ್ನು ಆಲಿಸಿದ ಸಿಎಂ, ಜಪಾನ್‌ನಲ್ಲಿ ದೊರೆತಿರುವ ಈ ಅಂತಾರಾಷ್ಟ್ರೀಯ ಮಟ್ಟದ ಸದಾವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು, ಆಧುನಿಕ ತಾಂತ್ರಿಕ ಕೌಶಲ್ಯ ಮತ್ತು ಪರಿಣತಿಯನ್ನು ಬೆಳೆಸಿಕೊಳ್ಳುವ ಮೂಲಕ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಯುವಕರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.

ವಿದೇಶಿ ನೇರ ಹೂಡಿಕೆಯ (FDI) ಪ್ರಮುಖ ತಾಣವಾಗಿರುವ ಕರ್ನಾಟಕದ ಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವುದು ಮತ್ತು ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ರಾಜ್ಯ ಸರ್ಕಾರದ 'ಬಿಯಾಂಡ್ ಬೆಂಗಳೂರು' (Beyond Bengaluru) ಉಪಕ್ರಮದ ಮೂಲಕ ಕೈಗಾರಿಕಾ ಅಭಿವೃದ್ಧಿ, ಹೂಡಿಕೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಬೆಂಗಳೂರಿನಿಂದ ಹೊರಗಿನ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಕೊಂಡೊಯ್ಯಲಾಗುತ್ತಿದೆ. ತನ್ಮೂಲಕ ರಾಜ್ಯದ ಪ್ರತಿಯೊಂದು ಪ್ರದೇಶವನ್ನೂ ಕರ್ನಾಟಕದ ಸಮತೋಲಿತ ಆರ್ಥಿಕ ಬೆಳವಣಿಗೆಯ ಪಯಣದಲ್ಲಿ ಪಾಲುದಾರರನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Category
ಕರಾವಳಿ ತರಂಗಿಣಿ