image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನೆಯಂಗಳದ ತುಳಸಿ ಹಬ್ಬದಲ್ಲಿ ಪ್ರಕೃತಿ, ಭಕ್ತಿ ಮತ್ತು ಆಯುರ್ವೇದದ ಸಂಗಮ

ಮನೆಯಂಗಳದ ತುಳಸಿ ಹಬ್ಬದಲ್ಲಿ ಪ್ರಕೃತಿ, ಭಕ್ತಿ ಮತ್ತು ಆಯುರ್ವೇದದ ಸಂಗಮ

ಚಾತುರ್ಮಾಸದ ಯೋಗನಿದ್ರೆಯಿಂದ ಶ್ರೀಮನ್ನಾರಾಯಣನು ಎಚ್ಚೆತ್ತುಕೊಳ್ಳುವ ಉತ್ಥಾನ ದ್ವಾದಶಿಯಂದು ನಡೆಯುವ ತುಳಸಿ ಹಬ್ಬ ಅಥವಾ ತುಳಸಿ ವಿವಾಹ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ಪ್ರಕೃತಿ, ಆಧ್ಯಾತ್ಮ ಮತ್ತು ಆರೋಗ್ಯದ ನಡುವಿನ ಅವಿನಾಭಾವ ನಂಟನ್ನು ಬೆಸೆಯುವ ಸಡಗರ. ದೇವರ ರೂಪದಲ್ಲೇ ಪ್ರಕೃತಿಯ ಅತ್ಯಮೂಲ್ಯ ಔಷಧೀಯ ಸಸ್ಯವನ್ನು ಮನೆಯಂಗಳದಲ್ಲೇ ನೆಟ್ಟು, ನಿತ್ಯವೂ ಪೂಜಿಸಿ, ಸಂರಕ್ಷಿಸುವ ಅಪೂರ್ವ ಪರಂಪರೆಯನ್ನು ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯನ್ನು ಸಾಕ್ಷಾತ್ ಲಕ್ಷ್ಮೀ ಸ್ವರೂಪಿಯೆಂದು ಆರಾಧಿಸಲಾಗುತ್ತದೆ. ಪುರಾಣಗಳ ಪ್ರಕಾರ, ಪತಿವ್ರತಾ ಶಿರೋಮಣಿಯಾದ ವೃಂದೆಯ ತಪಸ್ಸು ಮತ್ತು ಪಾತಿವ್ರತ್ಯಕ್ಕೆ ಮೆಚ್ಚಿದ ಮಹಾವಿಷ್ಣುವು ಆಕೆಗೆ ಸದಾ ತನ್ನೊಡನೆ ಇರುವ ವರವನ್ನು ನೀಡಿದನು. ವೃಂದೆಯೇ ಮುಂದೆ ಪವಿತ್ರ ತುಳಸಿ ಸಸ್ಯವಾಗಿ ಅವತರಿಸಿ, ವಿಷ್ಣುವಿನ ಶಾಲಿಗ್ರಾಮ ರೂಪದೊಂದಿಗೆ ವಿವಾಹವಾದಳು ಎಂಬುದು ಐತಿಹ್ಯ. ಆಧ್ಯಾತ್ಮಿಕ ದೃಷ್ಟಿಯಿಂದ ತುಳಸಿ ಕಟ್ಟೆಯು ಮನೆಯ ಸಕಾರಾತ್ಮಕ ಶಕ್ತಿಯ ಕೇಂದ್ರಬಿಂದು. ಮುಸ್ಸಂಜೆಯ ವೇಳೆ ತುಳಸಿ ಕಟ್ಟೆಯ ಮುಂದೆ ಹಚ್ಚುವ ತುಪ್ಪ ಅಥವಾ ಎಣ್ಣೆಯ ದೀಪವು ಮನೆಯೊಳಗಿನ ಅಜ್ಞಾನ, ನಕಾರಾತ್ಮಕತೆ ಮತ್ತು ಕತ್ತಲೆಯನ್ನು ದೂರ ಮಾಡಿ, ಮನಸ್ಸಿಗೆ ನೆಮ್ಮದಿ ಹಾಗೂ ಸಾತ್ವಿಕ ಭಾವವನ್ನು ತುಂಬುತ್ತದೆ. ತುಳಸಿ ವಿವಾಹದೊಂದಿಗೆ ಲೋಕದಲ್ಲಿ ಶುಭ ಕಾರ್ಯಗಳಿಗೆ ಚಾಲನೆ ಸಿಗುತ್ತದೆ ಎಂಬ ನಂಬಿಕೆಯ ಹಿಂದೆ, ಪ್ರಕೃತಿಯನ್ನು ಗೌರವಿಸಿ ಬದುಕನ್ನು ಆರಂಭಿಸಬೇಕು ಎಂಬ ಉದಾತ್ತ ಸಂದೇಶ ಅಡಗಿದೆ.

ಆಧ್ಯಾತ್ಮಿಕವಾಗಿ ತುಳಸಿ ಎಷ್ಟು ಪವಿತ್ರವೋ, ವೈಜ್ಞಾನಿಕವಾಗಿ ಹಾಗೂ ಆಯುರ್ವೇದದ ದೃಷ್ಟಿಯಲ್ಲಿ ಅಷ್ಟೇ ಶ್ರೇಷ್ಠವಾದ ಸಂಜೀವಿನಿ. ಆಯುರ್ವೇದ ಶಾಸ್ತ್ರದಲ್ಲಿ ತುಳಸಿಯನ್ನು ಸಸ್ಯಗಳ ರಾಣಿ ಮತ್ತು ಅಮೃತ ಎಂದು ಕರೆಯಲಾಗಿದೆ. ತುಲನಾ ನಾಸ್ತಿ ಅತ ಏವ ತುಳಸೀ — ಅಂದರೆ ಯಾವುದಕ್ಕೂ ಹೋಲಿಸಲಾಗದಷ್ಟು ಶ್ರೇಷ್ಠ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ ತುಳಸಿ ಎಂಬ ಹೆಸರು ಬಂದಿದೆ. ಮನೆಯಂಗಳದಲ್ಲಿ ಕಾಣಸಿಗುವ ಪ್ರಮುಖ ಪ್ರಭೇದಗಳಾದ ಕೃಷ್ಣ ತುಳಸಿ ಮತ್ತು ರಾಮ ತುಳಸಿ ಆಯುರ್ವೇದದಲ್ಲಿ ತಮ್ಮದೇ ಆದ ವಿಶಿಷ್ಟ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿವೆ. ಕಡು ನೇರಳೆ ಅಥವಾ ಕಪ್ಪು ಛಾಯೆಯ ಎಲೆ ಮತ್ತು ಕಾಂಡವನ್ನು ಹೊಂದಿರುವ ಕೃಷ್ಣ ತುಳಸಿಯು ಹೆಚ್ಚು ತೀಕ್ಷ್ಣ ಹಾಗೂ ಘಾಟು ಗುಣವನ್ನು ಹೊಂದಿದ್ದು, ತೀವ್ರವಾದ ಕೆಮ್ಮು, ಶೀತ, ಗಂಟಲು ಕಫ, ಜ್ವರ, ಉಸಿರಾಟದ ತೊಂದರೆ ಮತ್ತು ಚರ್ಮದ ಸೋಂಕುಗಳ ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ, ತಿಳಿ ಹಸಿರು ಎಲೆಗಳನ್ನು ಹೊಂದಿರುವ ರಾಮ ತುಳಸಿಯು ಸೌಮ್ಯ ಮತ್ತು ಸಿಹಿಯಾದ ಪರಿಮಳವನ್ನು ಹೊಂದಿದ್ದು, ದೈನಂದಿನ ಬಳಕೆಗೆ ಅತ್ಯುತ್ತಮವಾಗಿದೆ; ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಹಾಗೂ ದೇಹಕ್ಕೆ ತಂಪಾದ ನೆಮ್ಮದಿಯನ್ನು ನೀಡಲು ಹೆಚ್ಚು ಸಹಕಾರಿಯಾಗಿದೆ.

ಒಟ್ಟಾರೆಯಾಗಿ ತುಳಸಿ ಎಲೆಗಳಲ್ಲಿರುವ ಯುಜೆನಾಲ್, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಸೂಕ್ಷ್ಮಜೀವಿ ನಿರೋಧಕ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಾರ್ತಿಕ ಮಾಸದಲ್ಲಿ ಆರಂಭವಾಗುವ ಚಳಿಗಾಲದ ಶೀತ, ಕೆಮ್ಮು, ನೆಗಡಿ ಮತ್ತು ಗಂಟಲು ನೋವಿಗೆ ತುಳಸಿ ಕಷಾಯವು ರಾಮಬಾಣದಂತೆ ಕೆಲಸ ಮಾಡುತ್ತದೆ. ತುಳಸಿ ಗಿಡವು ಹಗಲು-ರಾತ್ರಿ ನಿರಂತರವಾಗಿ ಆಮ್ಲಜನಕವನ್ನು ಬಿಡುಗಡೆ ಮಾಡುವ ವಿಶೇಷ ಗುಣವನ್ನು ಹೊಂದಿದೆ. ಮುಂಜಾನೆ ಮತ್ತು ಸಂಜೆ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕುವುದರಿಂದ ಶುದ್ಧ ಗಾಳಿ ಸೇವನೆಯಾಗಿ ಶ್ವಾಸಕೋಶದ ಆರೋಗ್ಯ ವೃದ್ಧಿಸುತ್ತದೆ. ಅಸ್ತಮಾ, ಬ್ರಾಂಕೈಟಿಸ್‌ನಂತಹ ಉಸಿರಾಟದ ಸಮಸ್ಯೆಗಳ ನಿವಾರಣೆಗೂ ತುಳಸಿ ಸಹಕಾರಿ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ತುಳಸಿಯು ಅತ್ಯುತ್ತಮ ನೈಸರ್ಗಿಕ ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಗಳ ಸೇವನೆ ಅಥವಾ ತುಳಸಿ ಚಹಾವು ಮನಸ್ಸಿನ ಆತಂಕವನ್ನು ಕಡಿಮೆ ಮಾಡಿ, ನರಮಂಡಲವನ್ನು ಶಾಂತಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ತುಳಸಿ ಎಲೆಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ, ರಕ್ತ ಶುದ್ಧಿಯಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ. ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವ ಅದ್ಭುತ ಶಕ್ತಿ ಈ ಪುಟ್ಟ ಸಸ್ಯಕ್ಕಿದೆ.

ಕಬ್ಬು, ನೆಲ್ಲಿಕಾಯಿ ಗೊಂಚಲು, ಸೇವಂತಿಗೆ ಹೂವುಗಳು ಮತ್ತು ಹಣತೆಗಳ ಬೆಳಕಿನಲ್ಲಿ ಕಂಗೊಳಿಸುವ ತುಳಸಿ ಹಬ್ಬವು ನಮಗೆ ಒಂದು ದೊಡ್ಡ ಜೀವನ ಪಾಠವನ್ನು ಕಲಿಸುತ್ತದೆ. ಔಷಧೀಯ ಸಸ್ಯಗಳನ್ನು ಕೇವಲ ಕಾಡಿನ ಮೂಲೆಯಲ್ಲಿ ಬಿಡದೆ, ಅವುಗಳನ್ನು ದೇವರ ಸ್ಥಾನದಲ್ಲಿಟ್ಟು ಮನೆಯಂಗಳದಲ್ಲಿ ಬೆಳೆಸಿದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂಬುದು ನಮ್ಮ ಹಿರಿಯರ ದೂರದೃಷ್ಟಿಯಾಗಿತ್ತು. ಈ ತುಳಸಿ ಹಬ್ಬದ ಶುಭ ಸಂದರ್ಭದಲ್ಲಿ ಕೇವಲ ಸಾಂಪ್ರದಾಯಿಕ ಪೂಜೆಗೆ ಸೀಮಿತವಾಗದೆ, ಪ್ರತಿ ಮನೆಯಲ್ಲೂ ತುಳಸಿ ಸೇರಿದಂತೆ ಇತರ ಔಷಧೀಯ ಸಸ್ಯಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಸಂಕಲ್ಪ ಮಾಡೋಣ. ತುಳಸಿ ಕಟ್ಟೆಯ ದೀಪದ ಬೆಳಕು ನಮ್ಮೆಲ್ಲರ ಬದುಕಿನಲ್ಲಿ ಆಧ್ಯಾತ್ಮಿಕ ಶಾಂತಿಯನ್ನು, ತುಳಸಿಯ ಔಷಧೀಯ ಗುಣಗಳು ಉತ್ತಮ ಆರೋಗ್ಯವನ್ನು ಕರುಣಿಸಲಿ.
✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ