image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಆರ್ಥಿಕತೆಗೆ ಟ್ರಂಪ್ ಭೇಷ್; ರಾಹುಲ್ ಟೀಕೆಗೆ ಪರೋಕ್ಷ ತಿರುಗೇಟು

ಭಾರತದ ಆರ್ಥಿಕತೆಗೆ ಟ್ರಂಪ್ ಭೇಷ್; ರಾಹುಲ್ ಟೀಕೆಗೆ ಪರೋಕ್ಷ ತಿರುಗೇಟು

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಮೆರಿಕದಲ್ಲಿ ಆತಂಕ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕ ಬೆಳವಣಿಗೆಯನ್ನು ಕೊಂಡಾಡಿದ್ದಾರೆ. ಶ್ವೇತಭವನದಲ್ಲಿ ನಡೆದ ಸುಮಾರು 90 ನಿಮಿಷಗಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಭಾರತದ ಶೇ. 7ರಷ್ಟು ಜಿಡಿಪಿ ಬೆಳವಣಿಗೆ ಹಾಗೂ ಕಡಿಮೆ ಬಡ್ಡಿದರದ ನೀತಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಅಮೆರಿಕದ ಫೆಡರಲ್ ರಿಸರ್ವ್‌ನ ಹೆಚ್ಚಿನ ಬಡ್ಡಿದರ ನೀತಿಯನ್ನು ಟೀಕಿಸಿದ ಅವರು, ಅಮೆರಿಕದಲ್ಲೂ ಬಡ್ಡಿದರ ಕಡಿಮೆ ಮಾಡಿದರೆ ಆರ್ಥಿಕ ಬೆಳವಣಿಗೆ ಶೇ. 14ರಿಂದ 15ಕ್ಕೆ, ಮತ್ತು ಶೇ. 20ರವರೆಗೂ ತಲುಪಬಹುದು ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಭಾರತವು ಗಂಭೀರ ಆರ್ಥಿಕ ಸಂಕಷ್ಟದಲ್ಲಿದೆ ಎಂದಿದ್ದರು. ನಿರುದ್ಯೋಗ, ಉತ್ಪಾದನಾ ವಲಯದ ದುರ್ಬಲತೆ, ಶಿಕ್ಷಣ ವ್ಯವಸ್ಥೆಯ ಲೋಪಗಳು ಹಾಗೂ 'ಮೇಕ್ ಇನ್ ಇಂಡಿಯಾ' ಯೋಜನೆಯ ವೈಫಲ್ಯದ ಬಗ್ಗೆ ಅವರು ಟೀಕಿಸಿದ್ದರು. ರಾಹುಲ್ ಹೇಳಿಕೆಗೆ ಟ್ರಂಪ್ ನೇರ ಪ್ರತಿಕ್ರಿಯೆ ನೀಡದಿದ್ದರೂ, ಎರಡೂ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.

ಇದೇ ಸುದ್ದಿಗೋಷ್ಠಿಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ (QUAD) ಒಕ್ಕೂಟದ ಆರ್ಥಿಕ ಹಾಗೂ ಪೂರೈಕೆ ಸರಪಳಿ ಸಹಕಾರದ ಮಹತ್ವವನ್ನು ಟ್ರಂಪ್ ಶ್ಲಾಘಿಸಿದರು. 2027ರ ಆರಂಭದಲ್ಲಿ ಮುಂಬೈನಲ್ಲಿ ಮೊದಲ 'ಕ್ವಾಡ್ ಬಿಸಿನೆಸ್ ಲೀಡರ್ಸ್ ಫೋರಂ' ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ಇದಲ್ಲದೆ, ಮಧ್ಯಂತರ ಚುನಾವಣೆಯ ನಂತರ ವಲಸೆ ನೀತಿ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಡೆಮೊಕ್ರಾಟ್ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ ತಿಳಿಸಿದ ಟ್ರಂಪ್, ಅಗತ್ಯವಿದ್ದರೆ ಅಧ್ಯಕ್ಷೀಯ ವೀಟೋ ಅಧಿಕಾರ ಬಳಸುವುದಾಗಿ ಎಚ್ಚರಿಸಿದರು. ಜೊತೆಗೆ, ವಿದೇಶಗಳಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಅಮೆರಿಕನ್ ಟೆಕ್ ಕಂಪನಿಗಳ ಮೇಲೆ ಕಠಿಣ ತೆರಿಗೆ ವಿಧಿಸುವ ಸುಳಿವು ನೀಡಿದ ಅವರು, ಚೀನಾಕ್ಕೆ ಸುಧಾರಿತ ಚಿಪ್‌ಗಳ ರಫ್ತು ನೀತಿಯನ್ನು ಸಮರ್ಥಿಸಿಕೊಂಡರು ಹಾಗೂ ಎನ್‌ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರಿಗೆ ಮತ್ತೊಂದು ಅವಕಾಶ ಸಿಗಬೇಕು ಎಂದರು.

Category
ಕರಾವಳಿ ತರಂಗಿಣಿ